ಜಿಲ್ಲೆ

ವಿದ್ಯುತ್ ತಗುಲಿ ವೃದ್ಧೆ, ಹಸು ಸಾವು

ಬೇಲೂರು: ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವೃದ್ಧೆ ಮೃತಪಟ್ಟಿದ್ದು, ಒಂದು ಹಸು ಕೂಡ ಸಾವಿಗೀಡಾಗಿದೆ.


ಗ್ರಾಮದ ಗಂಗಮ್ಮ(65) ಮೃತರು. ಗಂಗಮ್ಮ ಶುಕ್ರವಾರ ಸಂಜೆ ಜಮೀನಿನ ಬಳಿ ಹಸು ಮೇಯಿಸಿಕೊಂಡು ಮನೆಗೆ ಬರುತ್ತಿದ್ದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಹಸುವಿನೊಂದಿಗೆ ತಂತಿ ತುಳಿದಿದ್ದಾರೆ. ಈ ಸಂದರ್ಭ ವಿದ್ಯುತ್ ಪ್ರವಹಿಸಿ ಹಸು ಹಾಗೂ ವೃದ್ಧೆ ಸ್ಥಳದಲ್ಲೇ ಸಾವೀಗೀಡಾಗಿದ್ದಾರೆ.


ಪ್ರತಿಭಟನೆ: ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕೊಟ್ಟಿರುವ ಲೈನ್ ಕೆಳಕ್ಕೆ ಬೀಳುವಂತಿದೆ. ತಕ್ಷಣವೇ ದುರಸ್ತಿಗೊಳಿಸಿ ಎಂದು ಗ್ರಾಮಸ್ಥರು ಒಂದು ತಿಂಗಳ ಹಿಂದೆಯೇ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಬಳ್ಳೂರು ಗ್ರಾಮಸ್ಥರು ಸೆಸ್ಕ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವೃದ್ಧೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.


ಸ್ಥಳಕ್ಕೆ ಸೆಸ್ಕ್ ಅಧಿಕಾರಿ, ಸಿಬ್ಬಂದಿ ಹಾಗೂ ಬೇಲೂರು ಪೊಲೀಸರು ಭೇಟಿ ನೀಡಿ ಮನವೊಲಿಸಿದರೂ ಒಪ್ಪದ ಗ್ರಾಮಸ್ಥರು ಸ್ಥಳಕ್ಕೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಬರಬೇಕು. ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಬೇಕೆಂದು ಎಂದು ಪಟ್ಟು ಹಿಡಿದರು.


ಸೆಸ್ಕ್ ಇಇ ಮಂಜುನಾಥ್ ಮಾತನಾಡಿ, ಮೃತರ ಕುಟುಂಬಕ್ಕೆ ಪರಿಹಾರವಾಗಿ 5 ಲಕ್ಷ ರೂ. ನೋಡುವುದಾಗಿ ಘೋಷಣೆ ಮಾಡಿದರೂ ಒಪ್ಪದ ಗ್ರಾಮಸ್ಥರು 15 ಲಕ್ಷ ರೂ.ಗಳನ್ನು ನಗದು ರೂಪದಲ್ಲೇ ನೀಡಬೇಕೆಂದು ಪಟ್ಟು ಹಿಡಿದರು.


ಈ ವೇಳೆ ರೈತ ಸಂಘದ ಅಧ್ಯಕ್ಷ ಬೋಗಾ ಮಲ್ಲೇಶ್ ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗೋವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.