ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಹರೀಶ್ ಕುಶಾಲಪ್ಪ, ದೀನಾಮಾಯಮ್ಮ, ಸುರೇಶ್, ಬಾಲಕೃಷ್ಣ ರೈ ಇತರರು ಇದ್ದರು. 
ಜಿಲ್ಲೆ

ವಿದ್ಯುತ್ ತಂತಿ ಬದಲಿಸಲು ಆಗ್ರಹ

ನಾಪೋಕ್ಲು: ಪೇರೂರು ಗ್ರಾಮದ ಇಗ್ಗುತ್ತಪ್ಪ ದೇವಾಲಯದ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅಪಾಯಕ್ಕೆ ಮೊದಲು ತಂತಿ ಬದಲಾಯಿಸಬೇಕು. ಕೀಯಲ್‌ಕೇರಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ, ದೊಡ್ಡ ಪುಲಿಕೋಟು ಶಾಲೆಯ ಮುಂಭಾಗದ ಬಸ್ ತಂಗುದಾಣ ದುರಸ್ತಿಪಡಿಸುವಂತೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.


ಬಲ್ಲಮಾವಟಿ, ಪುಲಿಕೋಟು, ಪೇರೂರು ಮತ್ತು ನೆಲಜಿ ಗ್ರಾಮ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ಪರಿಹಾರಕ್ಕೆ ಒತ್ತಾಯಿಸಿದರು.


ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಮಾತನಾಡಿ, ಪೇರೂರು ಗ್ರಾಮದ ಕೀಯಲ್‌ಕೇರಿಯಲ್ಲಿ ವಿದ್ಯುತ್ ಪರಿವರ್ತಕ ಇದ್ದರೂ ಗ್ರಾಮಸ್ಥರಿಗೆ ಸಮಸ್ಯೆ ಕಾಡುತ್ತಿದೆ. ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ಕೆಲವೆಡೆ ಕಂಬಗಳಲ್ಲಿ ವಿದ್ಯುತ್ ತಂತಿಗಳನ್ನು ಸರಿಯಾಗಿ ಜೋಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಲ್ಲಮಾವಟಿ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಕಾಫಿ, ಕಾಳುಮೆಣಸು ಇಳುವರಿ ಕುಸಿತವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರ ಒದಗಿಸಲು ಕ್ರಮವಹಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.


ಭಾಗಮಂಡಲ ಉಪವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ, ಕಾಡಾನೆ ಹಾವಳಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಲು ಅರಣ್ಯ ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಶುಭಾ ಮಾತನಾಡಿ, ಆಯುಷ್ ಚಿಕಿತ್ಸಾಲಯವನ್ನು ಆಯುರ್ವೇದ ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಕ್ಷೇಮ ಕೇಂದ್ರದಲ್ಲಿ ಯೋಗ ಹಾಲ್ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟೀರ ಹರೀಶ್ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬಾಳೆಯಡ ದೀನಾಮಾಯಮ್ಮ, ಸದಸ್ಯರಾದ ರಾಜೀವಿ, ಮುಕ್ಕಾಟೀರ ಸುತನ್ ಸುಬ್ಬಯ್ಯ, ಚೊಕೀರ ಬಾಬಿಭೀಮಯ್ಯ, ಪಿಡಿಒ ಚೌರೀರ ಪೂಣಚ್ಚ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ, ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿ ಅಕ್ಷಿತಾ, ಇತರರು ಪಾಲ್ಗೊಂಡಿದ್ದರು.