ತಿ.ನರಸೀಪುರ: ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಮೂವರು ರೈತರು ಸ್ಥಳದಲ್ಲೇ ದುರಂತ ಸಾವನ್ನಪ್ಪಿರುವ ಘಟನೆ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ತಾಲೂಕಿನ ನಿಲಸೋಗೆ ಗ್ರಾಮದ ರಾಚೇಗೌಡ ಎಂಬುವರ ಗದ್ದೆಯಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗ್ರಾಮದ ರಾಚೇಗೌಡ (62), ಅವರ ಪುತ್ರ ಹರೀಶ್ (30) ಹಾಗು ಮಹದೇವಸ್ವಾಮಿ(40) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗ್ರಾಮದ ವೀರತ್ತ ಸ್ವಾಮಿಯವರ ಚೌಲ್ಟ್ರಿ ಪಕ್ಕದ ರಾಚೇಗೌಡರ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತದ ಪಸಲಿಗೆ ಇಂದು ಬೆಳಿಗ್ಗೆ ರಾಚೇಗೌಡ ಮತ್ತು ಅವರ ಪುತ್ರ ಹರೀಶ್ ಔಷಧ ಸಿಂಪಡಣೆ ಮಾಡಲು ಮಹದೇವಸ್ವಾಮಿ ಎಂಬಾತನನ್ನು ಕರೆದುಕೊಂಡು ಹೋಗಿದ್ದ ವೇಳೆ ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸಿ, ಅದನ್ನು ಎತ್ತಲು ಮುಂದಾದ ವೇಳೆ ವಿದ್ಯುತ್ ಶಾಕ್‌ನಿಂದ ರಾಚೇಗೌಡ ಕೆಳಬಿದ್ದು, ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಮಗ ತಮ್ಮ ತಂದೆಗೆ ಮೂರ್ಚೆ ಬಂದಿರ ಬಹುದೆಂದು ತಿಳಿದು ಅವರನ್ನು ಮುಟ್ಟಿದ ವೇಳೆ ಆತನಿಗೂ ವಿದ್ಯುತ್ ಸ್ಪರ್ಶವಾಗಿ ನೆಲಕ್ಕೆ ಬಿದ್ದಿದ್ದಾನೆ.ಇವರಿಬ್ಬರನ್ನು ಗಮನಿಸಿದ ಮಹದೇವಸ್ವಾಮಿ ಎಂಬಾತ ತುಂಡಾಗಿ ಬಿದ್ದ ವೈರನ್ನು ಸರಿಪಡಿಸಲು ಹೋದಾಗ ಆತನೂ ಸಹ ಸ್ಪರ್ಶಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎಂದು
ತಿಳಿದು ಬಂದಿದೆ.
ಮೃತ ಹರೀಶ್ ಮೈಸೂರಿನ ಯೋಜನಾ ಸಮನ್ವಯಾಧಿಕಾರಿ ಕಚೇರಿಯ ಹೊರಗುತ್ತಿಗೆ ನೌಕರನಾಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ದುರ್ಘಟನೆಗೆ ಚೆಸ್ಕಾಂ ಇಲಾಖೆಯವರ ಬೇಜವಾಬ್ದಾರಿತನವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಒತ್ತಾಯಿಸಿದರು.ಈ ವೇಳೆ ಸ್ಥಳದಲ್ಲಿದ್ದ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಇಲಾಖಾ ವತಿಯಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು.