ಹಾಸನ: ವಿದ್ಯುತ್ ತಂತಿ ತಗುಲಿ ಸಿಂಧಿ ಹಸು ಸಾವನ್ನಪ್ಪಿದ್ದು, ಹಸುವನ್ನು ಕಾಪಾಡಲು ಹೋದ ರೈತ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ತಾಲ್ಲೂಕಿನ ಕಟ್ಟಾಯ ಹೋಬಳಿ ಬ್ಯಾಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ರೈತ ಕುಮಾರ್ ಎಂಬುವವರು ತಮ್ಮ ಸಿಂಧಿ ಹಸುವನ್ನು ಮೇಯಲು ಬಿಟ್ಟಿದ್ದರು. ಹಸು ಮೇಯುತ್ತಾ ಟ್ರಾನ್ಸ್ಫಾರ್ಮರ್ ಬಳಿ ಹೋಗಿದೆ. ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಒದ್ದಾಡತೊಡಗಿದೆ. ಹಸವನ್ನು ಉಳಿಸಿಕೊಳ್ಳಲು ರೈತ ಕುಮಾರ್ ಮುಂದಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ತಂತಿ ಬಿದ್ದಿರುವ ಬಗ್ಗೆ ಸ್ಥಳೀಯರು ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಚೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ದುರಸ್ತಿ ಮಾಡಿಲ್ಲ. ಅವರ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಾನ್ಸ್ಫಾರ್ಮರ್ ಸಮೀಪವೇ ಗ್ರಾಮಸ್ಥರು, ಮಕ್ಕಳು ಪ್ರತಿನಿತ್ಯ ಓಡಾಡುತ್ತಾರೆ, ಕೂಡಲೇ ಸ್ಥಳಕ್ಕೆ ಆಗಮಿಸಿ ಅನಾಹುತ ಸಂಭವಿಸುವ ಮುನ್ನ ದುರಸ್ತಿ ಕಾರ್ಯ ಮಾಡುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಸುಮಾರು ಐವತ್ತು ಸಾವಿರ ಬೆಲೆ ಬಾಳುವ ಸಿಂಧಿ ಹಸವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ.