ಜಿಲ್ಲೆ

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಹಾಸನ: ತೋಟದಲ್ಲಿ ಮರಗಸಿ ಮಾಡಲು ಕಬ್ಬಿಣದ ಏಣಿಯನ್ನು ತೆಗೆದುಕೊಂಡು ಹೋಗುವಾಗ ಏಣಿಗೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಅದ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೂವಯ್ಯ(60) ಎಂಬುವರು ತಮ್ಮದೇ ತೋಟದಲ್ಲಿ ಮರಗಸಿ ಮಾಡುವಾಗ ವಿದ್ಯುತ್ ತಂತಿ ಜೋತು ಬಿದ್ದಿದ್ದನ್ನು ಗಮನಿಸದೆ ಏಣಿಯನ್ನು ಎತ್ತಿಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬಿದ್ದಿದ್ದಾರೆ. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹೆತ್ತೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಮತ್ತು ಲೈನ್‌ಮನ್‌ಗಳಿಗೆ ತಿಳಿಸಿದ್ದರೂ ಸ್ಥಳಕ್ಕೆ ಬಾರದ ಕಾರಣ ಹೂವಯ್ಯರವರ ಸಾವಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.