ಜಿಲ್ಲೆ

ವಿದ್ಯುತ್ ಗುತ್ತಿಗೆ ಕಾರ್ಮಿಕನಿಗೆ ಗಂಭೀರ ಗಾಯ

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯುತ್ ಮಾರ್ಗ ದುರಸ್ತಿ ಕಾಮಗಾರಿ ವೇಳೆ ಗುತ್ತಿಗೆ ಕಾರ್ಮಿಕ ಕಂಬದೊಂದಿಗೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುತ್ತಿಗೆ ಕಾರ್ಮಿಕ ನಂದೀಶ್ ಗಾಯಗೊಂಡವರು. ಗುತ್ತಿಗೆ ಸಂಸ್ಥೆಯೊಂದು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಕಾರ್ಮಿಕ ನಂದೀಶ್ ಅವರು ಶುಕ್ರವಾರ ಗಣೇಶ್ ಕ್ಯಾಂಟೀನ್ ಮುಂಭಾಗದ ಹೆದ್ದಾರಿಯ ಚರಂಡಿ ಬದಿಯಲ್ಲಿ ನೆಡಲಾಗಿದ್ದ ಹೊಸ ಕಂಬವನ್ನು ಏರಿ ಇನ್ನೊಂದು ಕಂಬದಿಂದ ಅಳವಡಿಸುತ್ತಿದ್ದ ವಯರ್ ಅನ್ನು ಎಳೆಯುತ್ತಿದ್ದರು. ಈ ಸಂದರ್ಭ ಕಂಬ ನೆಲಕ್ಕುರುಳಿದೆ. ಅದರೊಂದಿಗೆ ನಂದೀಶ್ ಅವರು ಕೆಳಗೆ ಬಿದ್ದಿದ್ದಾರೆ. ಕಂಬಕ್ಕೆ ಅಳವಡಿಸಿದ್ದ ಉಕ್ಕಿನ ಸಲಾಕೆ ನಂದೀಶ್ ಅವರ ಸೊಂಟದ ಭಾಗಕ್ಕೆ ಚುಚ್ಚಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಕಂಬದಲ್ಲಿದ್ದ ಇನ್ನೊಬ್ಬ ಗುತ್ತಿಗೆ ಕಾರ್ಮಿಕ ಯೋಗೇಶ್ ಸಹ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.