ಜಿಲ್ಲೆ

ವಿದ್ಯುತ್ ಖಾಸಗೀಕರಣಕ್ಕೆ ಕಿಡಿ

ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಜೆಸ್ಕಾಂ ಕಚೇರಿ ಎದುರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಂಘ- ಸಂಸ್ಥೆಗಳ ಒಕ್ಕೂಟ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ನೀಲಪ್ಪ ದೋತ್ರೆ ಮಾತನಾಡಿ, ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರ ದಿಂದ ಇಂಧನ ಇಲಾಖೆ ನೌಕರರು ದಿಗ್ಭ್ರಮೆಗೊಂಡಿದ್ದಾರೆ. ಇದೊಂದು ಜನರ ಹಿತಾಸಕ್ತಿಗೆ ವಿರುದ್ಧವಾದ ಹಾಗೂ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡುವ ನಡೆಯಾಗಿದೆ. ಕೇಂದ್ರದ ಈ ನಡೆಯನ್ನು 11 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. ಆದರೂ ಕೇಂದ್ರ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ ಎಂದು ಕಿಡಿಕಾರಿದರು.
ಜನ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇಂಜಿನಿಯರ್ ಅಸೋಶಿಯೇಷನ್ ಜಿಲ್ಲಾ ಉಪಾಧ್ಯಕ್ಷ ರಾಜೇಶ ಹಿಪ್ಪರಗಿ, ಪ್ರಮುಖರಾದ ಮನೋಹರ ವಾಗ್ಮೋರೆ, ಆರ್.ಡಿ.ಚಂದ್ರಶೇಖರ, ಶಾಮರಾವ ಇಟಗಿ, ಮಹ್ಮದ್ ಮಾಜೀದ್, ಲಕ್ಷ್ಮಣ್ ಚವ್ಹಾಣ್, ವಿಶ್ವನಾಥ ರೆಡ್ಡಿ, ಬಾಬು ಕೋರೆ, ಸಿದ್ರಾಮ ಪಾಟೀಲ್, ಸಂತೋಷ ವಡ್ಡರ. ಮೀರಾ ಪಟೇಲ ಮಾಲಿ ಬಿರಾದಾರ. ಮುರುಗೇಶ ಮಠಪತಿ. ಅನೀಲ ಮುಗಳಿ. ಸೇರಿದಂತೆ ಇತರರಿದ್ದರು.