ಮೈಸೂರು: ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಏಕಸ್ವಾಮ್ಯತೆ ಇರಬಾರದು. ವಿದ್ಯುತ್ ಉತ್ಪಾದನಾ ಕ್ಷೇತ್ರವು ವೀಕೇಂದ್ರೀಕರಣವಾಗಿರಬೇಕು ಎಂದು ಹಿರಿಯ ಪತ್ರಕರ್ತ, ಅಂಕಣಕಾರ ಎಚ್.ಆರ್.ಶ್ರೀಶ ಹೇಳಿದರು.
ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಇನ್ಸ್‌ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಹಯೋಗದಲ್ಲಿ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಎಸ್ಕಾಂ ದರಗಳು ಕ್ರಾಸ್ ಸಬ್ಸಿಡಿ-ಹೊಸ ಮಾರ್ಗದತ್ತ’ ಕುರಿತು ಉಪನ್ಯಾಸ ನೀಡಿದರು.
ನಮ್ಮಲ್ಲಿ ವಿದ್ಯುತ್ ಉತ್ಪಾದನೆ ಇದೆ. ಆದರೆ, ಟ್ರಾನ್ಸ್‌ಮಿಷನ್ ಇಲ್ಲ. ವಿದ್ಯುತ್ ಖಾಸಗೀಕರಣವನ್ನು ಒಪ್ಪಲು ಸಾಧ್ಯವಿಲ್ಲ. ವಿದ್ಯುತ್ ನಿಗಮಗಳ ನೌಕರರಿಗೆ ನೀಡುವ ಪಿಂಚಣಿ ಹಣವನ್ನು ಗ್ರಾಹಕರ ಮೇಲೆ ಹೊರಿಸುವುದು ಸರಿಯಲ್ಲ. ಕೆಎಂಎಫ್ ನೌಕರರು ಹಾಲಿನ ದರದಲ್ಲಿ ತಮ್ಮ ಪಿಂಚಣಿ ಹಣವನ್ನು ಸೇರಿಸಿ ಹಾಲಿನ ದರ ನಿಗದಿಪಡಿಸಿ ಅಂತ ಕೇಳಬಹುದು ಎಂದರು.
ವಿದ್ಯುತ್ ವಲಯದ ನೀತಿ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವಿರೋಧಾಭಾಸಗಳಿವೆ. ವಿದ್ಯುತ್ ಅನ್ನು ಇಂದು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. ಸೋಲಾರ್ ವಿದ್ಯುತ್ ಬಳಕೆಗೆ ತೆರಿಗೆ ಕಡಿಮೆ ಇದೆ. ಕೈಗಾರಿಕೆಗಳಿಗೆ ವಿದ್ಯುತ್ ಕಚ್ಚಾ ಪದಾರ್ಥವಿದ್ದಂತೆ. ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಬೇಕು.
ಇದು ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುತ್ತದೆ. ಗ್ರಾಹಕರಿಗೆ ತೊಂದರೆ ನೀಡಬಾರದು. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಆದರೆ, ಕೃಷಿಗೆ ಬಳಕೆಯಾಗುತ್ತಿರುವ ವಿದ್ಯುತ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ಎಸ್ಕಾಂಗಳು ಮುಳುಗುವ ಸ್ಥಿತಿಯಲ್ಲಿವೆ. ರಾಜ್ಯ ಸರ್ಕಾರಕ್ಕೆ ಸೇರಿರುವ ಕಾರಣ ಉಳಿದುಕೊಂಡಿವೆ ಎಂದು ಹೇಳಿದರು.
ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್ ಮಾತನಾಡಿ, ಮಾಧ್ಯಮ ಸಾಕ್ಷರತೆ ಕುರಿತು ಹೆಚ್ಚು ಕೆಲಸ ಆಗಬೇಕಿದೆ. ಮಾಧ್ಯಮ ಸಾಕ್ಷರತೆ ಕುರಿತು ಚಳವಳಿಯೇ ನಡೆಯಬೇಕಿದೆ ಎಂದರು.
ಇಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ಡಾ. ಆರ್.ದೀಪು ಮಾತನಾಡಿದರು. ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಸಿ.ಎಂ.ಸುಬ್ರಮಣಿಯನ್, ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಉಪಸ್ಥಿತರಿದ್ದರು.