ನಾಲತವಾಡದ ಹೆಸ್ಕಾಂ ಶಾಖಾಧಿಕಾರಿ ಕಚೇರಿಗೆ ನುಗ್ಗಿ ಬೀಗ ಜಡಿದ ರೈತರು. 
ಜಿಲ್ಲೆ

ವಿದ್ಯುತ್ ಕಣ್ಣುಮುಚ್ಚಾಲೆ ಹೆಸ್ಕಾಂ ಶಾಖಾ ಕಚೇರಿಗೆ ಬೀಗ

ನಾಲತವಾಡ: ಹಿರೇಮುರಾಳ ವಿದ್ಯುತ್ ಘಟಕದಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ಕಳಪೆ ಸೇವೆಯಿಂದ ನಮಗೆ ತೊಂದರೆಯಾಗುತ್ತಿದೆ. ನಾಲತವಾಡ ಮೂಲಕ ವಿದ್ಯುತ್ ಕೊಡಿ ಎಂದು ಹಿರೇಮುರಾಳ, ರಕ್ಕಸಗಿ, ಬಲದಿನ್ನಿ, ಬಂಗಾರಗುಂಡ ಹಾಗೂ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈಚೆಗೆ ಹರಿಸಲಾದ ಕಾಲುವೆ ನೀರಿನಿಂದ ಹಾಗೂ ನದಿಯಿಂದ ಒಣಗುತ್ತಿರುವ ಜಮೀನುಗಳಿಗೆ ನೀರುಣಿಸುವ ಚಟುವಟಿಕೆ ಆರಂಭಗೊಂಡಿದೆ. ಮಳೆ ಇಲ್ಲದೇ ತತ್ತರಿಸಿದ ನಾವು ಚಿಗುರೊಡೆದ ಬೆಳೆಗಳಿಗೆ ಜೀವ ಕಳೆ ತುಂಬುತ್ತಿದ್ದೇವೆ. ಇರುವ ಬೆಳೆ ಕೈಗೆ ಬಂದಷ್ಟು ಬರಲಿ ಎನ್ನುವ ದೃಷ್ಟಿಯಿಂದ ನಿದ್ರೆಗೆಟ್ಟು ಬೆಳೆಗಳಿಗೆ ನೀರುಣಿಸಲು ಜಮೀನಲ್ಲೇ ವಾಸ ಮಾಡುತ್ತಿದ್ದೇವೆ. ಆದರೆ ಮೇಲಿಂದ ಮೇಲೆ ಕೈಕೊಡುವ ವಿದ್ಯುತ್‌ನಿಂದ ರಾತ್ರಿಯಿಡಿ ಜಮೀನಲ್ಲೇ ಇದ್ದರೂ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಕಬ್ಬು ಒಣಗುತ್ತಿದೆ. ತೊಗರಿ ಇತರೆ ಬೆಳೆ ಬಾಡುತ್ತಿವೆ ಎಂದು ರೈತರು ಸ್ಥಳದಲ್ಲಿದ್ದ ಹೆಸ್ಕಾಂ ಶಾಖಾಧಿಕಾರಿ ಬಿ.ಟಿ. ಮ್ಯಾಗೇರಿಯವರನ್ನು ತರಾಟೆ ತಗೆದುಕೊಂಡರು.

ರೈತರ ಮುತ್ತಿಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎಎಸ್‌ಐ ಎ.ಎಸ್. ಸಾಲಿ, ಬಸವರಾಜ ಚಿಂಚೊಳ್ಳಿ, ಹೆಬ್ಬುಲಿ ಹಾಗೂ ಮುದ್ದೇಬಿಹಾಳದ ಪೊಲೀಸರು ತಡೆದರು. ಈ ವೇಳೆ ರೈತರಾದ ಪಪಂ ಮಾಜಿ ಸದಸ್ಯ ಭೀಮಣ್ಣ ಗುರಿಕಾರ, ಶ್ರೀಕಾಂತ ನಾಡಗೌಡ, ಗುಡದಪ್ಪ ಕಮರಿ(ಬಿಜ್ಜೂರ), ಡಾ. ಅಮರೇಶ ವಾಲಿ ಮಾತನಾಡಿ, ಅನಧಿಕೃತವಾಗಿ ಲೋಡ್‌ಶೆಡ್ಡಿಂಗ್ ಮಾಡುತ್ತಿರುವ ನೀವು ಸರ್ಕಾರದ ಆದೇಶ ತೋರಿಸಬೇಕು. ಹಿಂದೆ ರಾತ್ರಿ 4ತಾಸು ಹಗಲು 3 ತಾಸು ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕೇವಲ ರಾತ್ರಿ 2 ತಾಸು ಮಾತ್ರ ಕೊಡುತ್ತೀರಿ. ರೈತರ ಪಾಡೇನು ಎಂದು ಹರಿಹಾಯ್ದರು.

ಸ್ಥಳದಲ್ಲಿದ್ದ ಶಾಖಾಧಿಕಾರಿ ಬಿ.ಟಿ. ಮ್ಯಾಗೇರಿ ಮೇಲಧಿಕಾರಿಗಳೊಂದಿಗೆ ಮಾತನಾಡಿ ಇನ್ನೆರಡು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ವಿನಂತಿಸಿಕೊಂಡ ನಂತರ ಪ್ರತಿಭಟನೆ ಕೈಬಿಡಲಾಯಿತು.