ಜಿಲ್ಲೆ

ವಿದ್ಯುತ್ ಕಂಪನಿ, ಖಾಸಗೀಕರಣ ಒಪ್ಪಲಾಗದು

ಬೀದರ್: ವಿದ್ಯುತ್ ವಿತರಣಾ ಕಂಪನಿಗಳನ್ನು ಯಾವುದೇ ಕಾರಣಕ್ಕೆ ಖಾಸಗೀಕರಣ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆಗಳು ಮಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ನೌಕರರ ಸಂಘದಿಂದ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜೆಸ್ಕಾಂ ಕಚೇರಿ ಎದುರು ಕೆಲಕಾಲ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು. ಯಾವುದೇ ಕಾರಣಕ್ಕೂ ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ಬಿಡೇವು. ಇದಕ್ಕಾಗಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದರು.

ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗುವ ಮೂಲಕ ಸರ್ಕಾರ ಉತ್ತಮ ನಡೆಯುತ್ತಿರುವ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದೆ. ಖಾಸಗೀಕರಣದಿಂದ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮಾತ್ರವಲ್ಲ, ಜನಸಾಮಾನ್ಯರು ಮತ್ತು ರೈತರಿಗೂ ಸಾಕಷ್ಟು ಸಂಕಷ್ಟ ಎದುರಾಗಲಿವೆ. ಜನಹಿತ ವಿರುದ್ಧದ ಧೋರಣೆ ಕೈಬಿಡಬೇಕೆಂದು ಆಗ್ರಹಿಸಿದರು.

ವಿದ್ಯುತ್ ನೌಕರರ ಸಂಘದ ಬೀದರ್ ವೃತ್ತದ ಸಂಘಟನಾ ಕಾರ್ಯದರ್ಶಿ ವೀರಣ್ಣ ಮುದ್ನಾಳೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಅಶೋಕ ರೆಡ್ಡಿ, ಅಧಿಕಾರಿಗಳಾದ ಎಂ.ಎಂ.ಪವಾರ್, ಮಾಣಿಕ ಪವಾರ್, ಶಿವಶಂಕರ, ಚಂದ್ರಶೇಖರ, ವಿಜಯಕುಮಾರ ಪಂಚಾಳ, ಅನೀಲಕುಮಾರ ಕುಲಕರ್ಣಿ, ಪ್ರಮುಖರಾದ ಭರತಭೂಷಣ, ಸುಮಂತ ಕಟ್ಟಿಮನಿ , ಸೂರ್ಯಕಾಂತ, ಶಿವಮೂರ್ತಿ ಬಟ್ನಾಪುರೆ, ಬಾಬುರಾವ ಜಾಂತೆ, ಮಹಾಂತೇಶ ಫುಲೆ, ಅನೀಲಕುಮಾರ ಪಾಟೀಲ್, ನಟರಾಜ ಹೊಸಮನಿ, ಅಖೀಲಪಾಷಾ, ಸುಲ್ತಾನ ಇತರರಿದ್ದರು.

ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವುದು ಮತ್ತು ವಿದ್ಯುತ್ ಕಂಪನಿಗಳ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ಇದು ಕಾರ್ಮಿಕ ವಿರೋಧಿತನದ ನೀತಿಯಾಗಿದೆ. ಕೂಡಲೇ ಇದನ್ನು ಕೈಬಿಡಬೇಕು.ವೀರಣ್ಣಾ ಮುದ್ನಾಳೆ,ವಿದ್ಯುತ್ ನೌಕರರ ಸಂಘ ಸಂಘಟನಾ ಕಾರ್ಯದರ್ಶಿ