ಚಾಮರಾಜನಗರ : ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳಿಂದ ಜನ-ಜಾನುವಾರುಗಳು ಬಲಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಹಳೆಯದಾದ ವಿದ್ಯುತ್ ಕಂಬಗಳು, ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ರೈತಾಪಿ ವರ್ಗ ಆತಂಕದಲ್ಲಿ ಬದುಕು ದೂಡುವಂತಾಗಿದೆ.
ಚಾಮರಾಜನಗರ ಉಪ ವಿಭಾಗದ ಉಪ ವಿದ್ಯುತ್ ಪರಿವೀಕ್ಷಕರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 2022-23ನೇ ಸಾಲಿನಲ್ಲಿ ವಿದ್ಯುತ್ ಅವಘಡಗಳಿಂದ 6 ಜನ ಮೃತಪಟ್ಟಿದ್ದು, 9 ಜಾನುವಾರು ಅಸುನೀಗಿದೆ. 2023-24ನೇ ಸಾಲಿನಲ್ಲಿ ಇಬ್ಬರು ಮೃತಪಟ್ಟಿದ್ದರೆ, 7 ಜಾನುವಾರು ಬಲಿಯಾಗಿದೆ. 2024ರ ಏಪ್ರಿಲ್‌ನಿಂದ ಈವರೆಗೆ ಇಬ್ಬರು ಮೃತಪಟ್ಟಿದ್ದು, 7 ಸಾಕು ಪ್ರಾಣಿಗಳು ಸತ್ತಿವೆ. ಪರಿಣಾಮವಾಗಿ ವಿದ್ಯುತ್ ಅವಘಡಗಳು ಕೃಷಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಒಂದೆಡೆ ರೈತರು ಮೃತಪಟ್ಟರೆ, ಮತ್ತೊಂದೆಡೆ ಜಾನುವಾರುಗಳು ಸಾಯುತ್ತಿವೆ. ಇದಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಜಮೀನುಗಳಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು, ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಇರುವುದು, ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಹಬ್ಬಿರುವುದು ಹಾಗೂ ಇನ್ನಿತರ ಸಮಸ್ಯೆಗಳಿಂದ ರೈತಾಪಿ ವರ್ಗ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತಿದೆ.
ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ತೊಡಕಾಗಿರುವ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಯಾವುದು? ಅದಕ್ಕೇ ಪರಿಹಾರಗಳು ಏನು? ಎಂಬುವ ನಿಟ್ಟಿನಲ್ಲಿ ರೈತ ಮುಖಂಡರು, ರೈತರು ಹಾಗೂ ಅಧಿಕಾರಿಗಳಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ಮೇಲಧಿಕಾರಿಗಳ ತಲೆದಂಡವಾಗಬೇಕು
ವಿದ್ಯುತ್ ಗುತ್ತಿಗೆದಾರರು ನಿಯಮವನ್ನು ಪಾಲಿಸಿ ಕಂಬಗಳನ್ನು ಅಳವಡಿಸುವುದಿಲ್ಲ. ಇದು ವಿದ್ಯುತ್ ಅವಘಡಗಳಿಗೆ ಕಾರಣವಾಗುತ್ತಿದೆ. ವಿದ್ಯುತ್ ಅವಘಡಗಳಿಂದ ರೈತರಿಗೆ ಸಾವು-ನೋವು ಉಂಟಾದಾಗ, ತಳಮಟ್ಟದ ಲೈನ್‌ಮನ್ ಮತ್ತು ಇನ್ನಿತರ ನೌಕರರನ್ನು ವಜಾ ಮಾಡಬಾರದು. ಬದಲಾಗಿ ಇಲಾಖೆಯ ಮೇಲಧಿಕಾರಿಗಳ ಮೇಲೂ ಕ್ರಮವಾಗಬೇಕು. ಆಗ ಮಾತ್ರ ಇಲಾಖೆಯಲ್ಲಿ ವಸ್ತುನಿಷ್ಠತೆ ತರಲು ಸಾಧ್ಯವಾಗುತ್ತದೆ. ಅವಘಡಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಬೇಕು.
ಹೊನ್ನೂರು ಪ್ರಕಾಶ್ ರೈತ ನಾಯಕ, ಚಾಮರಾಜನಗರ
ಹೊಂದಾಣಿಕೆ ಕೊರತೆ
ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆ ಇದೆ. ವಿದ್ಯುತ್ ಅವಘಡಗಳು ಸಂಭವಿಸಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವ ಕಾನೂನು ಜಾರಿಯಾಗಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತೋರಿಕೆಗಾಗಿ ರೈತರು ಮತ್ತು ಸಾರ್ವಜನಿಕರೊಂದಿಗೆ ಸಭೆಗಳನ್ನು ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯೂ ಇದಕ್ಕೆ ಕಾರಣವಾಗಿದೆ. ಈ ಸಂಬಂಧ ಒಂದು ಪ್ಯಾಕೇಜ್ ಘೋಷಣೆ ಮಾಡಿ, ಹಳೆಯದಾದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಾವಣೆ ಮಾಡಬೇಕು.
ಹಳ್ಳಿಕೆರೆಹುಂಡಿ ಭಾಗ್ಯರಾಜ್ ರೈತ ಮುಖಂಡ, ಚಾಮರಾಜನಗರ
ಜಾಗೃತಿ ವಹಿಸುವುದೇ ಉಪಾಯ
ಸುಮಾರು 40-50 ವರ್ಷಗಳು ಹಳೆಯದಾದ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ತೆರವುಗೊಳಿಸಿದರೆ ಕಳಚಿ ಬೀಳುವುದನ್ನು ತಡೆಗಟ್ಟಬಹುದು. ಮಳೆ, ಬಿರುಗಾಳಿಯಂತಹ ಸಂದರ್ಭದಲ್ಲಿ ಹೊಸ ವಿದ್ಯುತ್ ತಂತಿಗಳು ಮತ್ತು ಕಂಬಗಳು ಕೂಡ ತುಂಡಾಗುತ್ತದೆ. ಕೆಲವು ವೇಳೆ ಇನ್ಸುಲೇಟರ್ ಪಂಚರ್ ಆಗುವುದರಿಂದಲೂ ತಂತಿಗಳು ಕಳಚಿ ಬೀಳುತ್ತದೆ. ಅಯ್ಯನಪುರದಲ್ಲಿ ಆದ ಅವಘಡವೂ ಇದೆ ಆಗಿದೆ. ಒಂದು ವೇಳೆ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದರೆ ಅವಘಡ ನಡೆಯುತ್ತಿರಲಿಲ್ಲ. ಗಾಳಿ-ಮಳೆಯ ಸಂದರ್ಭದಲ್ಲಿ ರೈತರು ಜಮೀನುಗಳಿಗೆ ಹೋಗುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.
ರಮೇಶ್ ದಡದಹಳ್ಳಿ
ಗ್ರಾಮ ವಿದ್ಯುತ್ ಪ್ರತಿನಿಧಿ, ಚಂದಕವಾಡಿ, ಚಾಮರಾಜನಗರ
ಪರಿಹಾರ ಹೆಚ್ಚಳ ಮಾಡಿ
ವಿದ್ಯುತ್ ಅವಘಡಗಳಿಂದ ಮೃತಪಟ್ಟ ರೈತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರವನ್ನು ನಿಗದಿ ಮಾಡಲಾಗಿದೆ.ಈ ಪರಿಹಾರ ಮೊತ್ತವನ್ನು 25 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಹದಿನೈದು ದಿನಗಳಿಗೊಮ್ಮೆ ಮೇಲಧಿಕಾರಿಗಳು ಲೈನ್‌ಮನ್‌ಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಹಾಗಿದ್ದಾಗ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವಘಡಗಳು ಸಂಭವಿಸಿದಾಗ ತಳಮಟ್ಟದ ಸಿಬ್ಬಂದಿ ಬದಲಾಗಿ, ಉನ್ನತ ಅಧಿಕಾರಿ ಮೇಲೂ ಕ್ರಮ ಜರುಗಿಸಬೇಕು.
ಮೂಡ್ಲುಪುರ ನಂದೀಶ್
ಜಿಲ್ಲಾಧ್ಯಕ್ಷ, ವೀರಶೈವ ಲಿಂಗಾಯತ ಮಹಾಸಭಾ, ಚಾಮರಾಜನಗರ
ಸರ್ಕಾರದ ಧೋರಣೆಯೇ ಕಾರಣ
ಸರ್ಕಾರಗಳು ರೂಪಿಸುವ ಯೋಜನೆಗಳು ಹಾಗೂ ಕಾನೂನುಗಳು ರೈತರ ಪರವಾಗಿ ಇರುವುದಿಲ್ಲ. ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯೇ ವಿದ್ಯುತ್ ಅವಘಡಗಳಿಗೆ ಕಾರಣವಾಗುತ್ತದೆ. ಇಲಾಖೆ ತಳಮಟ್ಟದ ನೌಕರರಿಗೆ ಸೂಕ್ತ ರೀತಿಯಲ್ಲಿ ಸವಲತ್ತುಗಳನ್ನು ನೀಡುವುದಿಲ್ಲ. ಆ ಕಾರಣಕ್ಕೆ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸುವಲ್ಲಿಯೂ ವಿಳಂಬವಾಗುತ್ತದೆ. ಆಗ ಅವಘಡಗಳು ಸಂಭವಿಸುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಬೇಕಿದೆ.
ನಿಜಗುಣ
ಯುವ ಕೃಷಿಕ, ಆಲೂರು, ಚಾಮರಾಜನಗರ
ಸಣ್ಣ ಪುಟ್ಟ ಸಮಸ್ಯೆಯಿಂದ ದೊಡ್ಡ ದುರಂತ
ಸೆಸ್ಕ್‌ನಿಂದ ಅಳವಡಿಸುತ್ತಿರುವ 9 ಮೀ ಎತ್ತರದ ವಿದ್ಯುತ್ ಕಂಬಗಳನ್ನು ಎಲ್ಲ ಕಡೆ ಕಡ್ಡಾಯವಾಗಿ ಅಳವಡಿಸಬೇಕು. ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಬೇಕು. ವಿದ್ಯುತ್ ಕಂಬಗಳಿಗೆ ಹಬ್ಬಿರುವ ಗಿಡಗಂಟಿಗಳನ್ನು ಕಾಲಕಾಲಕ್ಕೆ ತೆರವುಗೊಳಿಸಬೇಕು. ರೈತರು ಕರೆ ಮಾಡಿದಾಗ ಲೈನ್‌ಮನ್‌ಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ರೈತರು ಕೂಡ ಅವರೊಂದಿಗೆ ನೆರವಾಗುತ್ತಾರೆ. ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿದರೆ ದೊಡ್ಡ ದುರಂತಗಳು ಆಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳು ಕಾರ್ಯಪ್ರವೃತ್ತರಾಗಬೇಕು.
ಯಶವಂತ
ರೈತ, ಜ್ಯೋತಿಗೌಡನಪುರ, ಚಾಮರಾಜನಗರ
ವಿಳಂಬ ಧೋರಣೆ ಸಲ್ಲದು
ರೈತಾಪಿ ವರ್ಗ ವಿದ್ಯುತ್ ಮೇಲೆ ನಿತ್ಯವೂ ಅವಲಂಬಿತವಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಾರೆ. ಇತ್ತೀಚೆಗೆ ಸಂಭವಿಸಿರುವ ವಿದ್ಯುತ್ ಅವಘಡಗಳು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಆಗಿದೆ. ಕರೆಂಟ್ ಬಿಲ್ ಕಟ್ಟದಿದ್ದರೆ ಒಂದೇ ದಿನಕ್ಕೆ ಫ್ಯೂಸ್ ಕಿತ್ತುಕೊಂಡು ಹೋಗುತ್ತಾರೆ. ಆದರೆ ವಿದ್ಯುತ್ ತಂತಿಗಳು ತುಂಡಾದಾಗ ಅಷ್ಟೇ ಕ್ಷಣಮಾತ್ರದಲ್ಲಿ ಸ್ಪಂದಿಸುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯುತ್ ಅವಘಡಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು.
ಮಂಜುಳಾ
ರೈತ ಮಹಿಳೆ, ಹರವೆ, ಚಾಮರಾಜನಗರ