ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ ಒಂದು ವಿಶ್ವವಿದ್ಯಾಲಯವಿದ್ದಂತೆ. ಈ ವಿಶ್ವ ವಿದ್ಯಾಲಯದ ಸಂಪರ್ಕಕ್ಕೆ ನಾವೆಲ್ಲಾ ಬಂದಿರುವುದು ನಮ್ಮ ಭಾಗ್ಯ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಭಾನುವಾರ ಆಯೋಜಿಸಿದ್ದ ಪ್ರೊ. ಎ. ಮುರಿಗೆಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
140 ಕ್ಕೂ ಹೆಚ್ಚು ದತ್ತಿ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ವೈವಿಧ್ಯಮಯ ಕಾರ್ಯಕ್ರಮ ನಡೆಸುತ್ತಿದೆ. ಅವುಗಳಿಗೆ ಮುರಿಗೆಪ್ಪ ದತ್ತಿ ಸೇರಿರುವುದು ಹೆಮ್ಮೆಯ ಸಂಗತಿ. ಎ.ಮುರಿಗೆಪ್ಪ ಸರಳ, ಸಜ್ಜನಿಕೆ, ವಿನಯ ಹಾಗೂ ನಗುಮೊಗದಿಂದ ತಾಳ್ಮೆಯಿಂದ ವ್ಯವಹರಿಸುವ ಪರಿ ಎಲ್ಲರನ್ನು ಆಕರ್ಷಿಸುತ್ತದೆ. ಸಮಾಜಕ್ಕೆ ಸಾಹಿತ್ಯಿಕವಾಗಿ ಅವರದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಡಾ. ಶಶಿಧರ ನರೇಂದ್ರ ಮಾತನಾಡಿ, 80ರ ದಶಕದಲ್ಲೇ ರಂಗಭೂಮಿ ಸಂಘಟಕ, ನಟ, ನಿರ್ದೇಶಕ, ರಂಗ ತಂತ್ರಜ್ಞರಾಗಿ ಧಾರವಾಡದಲ್ಲಿ ರಂಗಭೂಮಿ ಕುರಿತು ಸಾಕಷ್ಟು ಕೆಲಸ ಮಾಡುವುದರ ಜತೆಗೆ ಅನೇಕ ಅತ್ಯುತ್ತಮ ನಾಟಕಗಳನ್ನು ರಂಗಕ್ಕೆ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಎ. ಮುರಿಗೆಪ್ಪ ವಿರಚಿತ ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹದೇವ ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರೊ. ಎ. ಮುರಿಗೆಪ್ಪ, ಲೀಲಾ ಮುರಿಗೆಪ್ಪ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಶ್ರೀ ಹಿರಿಶಾಂತವೀರ ಸ್ವಾಮೀಜಿ, ಡಾ. ಬಸವರಾಜ ಡೋಣೂರ, ಡಾ. ವೀರಣ್ಣ ರಾಜೂರ, ಡಾ. ಡಿ.ಎಂ. ಹಿರೇಮಠ, ಡಾ. ಬಾಳಪ್ಪಾ ಚಿನಗುಡಿ, ಮಲ್ಲಿಕಾರ್ಜುನ ಮೇಟಿ, ಡಾ. ಮಹೇಂದ್ರ ಹರಿಹರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.