ಚಿತ್ರದುರ್ಗ: ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಕಾರ್ಯಕರ್ತರು, ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯರು ಶೌಚಗೃಹ ಬಳಸುವ ವಿಡಿಯೋ ಮಾಡಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಅದೇ ಕಾಲೇಜಿನ ಯುವತಿಯರು ಶೌಚಗೃಹ ಬಳಸುವ ವಿಡಿಯೋ ಮಾಡಿರುವ ಮೂವರು ವಿದ್ಯಾರ್ಥಿನಿಯರು ಅದನ್ನು ತಮ್ಮದೇ ಸಮುದಾಯದವರೊಂದಿಗೆ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲೂ ಶೇರ್ ಆಗುತ್ತಿದೆ. ಇದು ಆತಂಕಕಾರಿ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತ್ಯತೆ ಹೊರಬರಲು ತನಿಖೆ ಕೈಗೊಳ್ಳಬೇಕು. ಇದರ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯಬೇಕು. ಅಲ್ಲಿನ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಇಂತಹ ಘಟನೆ ರಾಜ್ಯದ ಯಾವುದೇ ಕಾಲೇಜಿನಲ್ಲಿ ಮರುಕಳಿಸದಂತೆ ಪ್ರತಿ ಜಿಲ್ಲೆಯಲ್ಲೂ ರಾಜ್ಯ ಸರ್ಕಾರ ಜಿಲ್ಲಾಮಟ್ಟದ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಎಸ್.ಸುದರ್ಶನ್ ನಾಯ್ಕ, ಕನಕರಾಜ್, ಮನೋಜ್, ದಯಾನಂದ್, ಚೈತ್ರಾ, ಪೂರ್ಣಿಮಾ, ಸುಮನ್ ಇತರರಿದ್ದರು.