ಜಿಲ್ಲೆ

ವಿದ್ಯಾರ್ಥಿನಿಯರ ಆತ್ಮರಕ್ಷಣೆಗೆ ಕರಾಟೆ ಅಗತ್ಯ: ಜಿ.ಆರ್.ಮಹೇಶ್

reportermys

ಮೈಸೂರು: ವಿದ್ಯಾರ್ಥಿನಿಯರ ಆತ್ಮರಕ್ಷಣೆಗೆ ಕರಾಟೆ ಅಗತ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಕರಾಟೆ ಕಲಿತು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜರಾಜೇಶ್ವರಿ ನಗರದ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದು, ಹಗಲು ರಾತ್ರಿ ಎನ್ನದೆ ಗಂಡಸರಿಗೆ ಸರಿ ಸಮನಾಗಿ ದುಡಿಯುತ್ತಿದ್ದಾರೆ. ಆದ್ದರಿಂದ ಕರಾಟೆ ಕಲೆಯನ್ನು ಕಲಿತ್ತಿದ್ದರೆ ಎಂತಹ ಸಮಯದಲ್ಲೂ ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಈ ಅವಕಾಶವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಸೋತವರು ಹತಾಶರಾಗಬೇಡಿ ಮತ್ತೆ ಪ್ರಯತ್ನಿಸಿ, ಗೆದ್ದವರು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಎಂದು ಶುಭ ಹಾರೈಸಿದರು.
ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಂಜನಗೂಡಿನ ಕೆ.ಎಂ. ರಕ್ಷಿತಾ, ದ್ವಿತೀಯ ಸ್ಥಾನ ಪಡೆದ ಮೈಸೂರಿನ ಗೀತಾಂಜಲಿ, ತೃತೀಯ ಸ್ಥಾನ ಪಡೆದ ಎಚ್.ಡಿ. ಕೋಟೆಯ ಅಂಜಲಿ ಅವರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೋಸಲೆ ಸಿದ್ದರಾಜು, ಮೈಸೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಮೇಘ, ತಾಲೂಕು ಕಲ್ಯಾಣಾಧಿಕಾರಿಗಳಾದ ವಿಶ್ವನಾಥ್, ಸ್ವರ್ಣಲತಾ, ಚಂದ್ರಕಲಾ, ಶಶಿಕಲಾ, ಹರೀಶ್, ಸುಕನ್ಯ, ನಾಗರತ್ನ, ತೀರ್ಪುಗಾರರಾದ ವೆಂಕಟೇಶ್, ಮಹೇಶ್, ಗುರುಪ್ರಸಾದ್, ನಾಗಾಭರಣ, ಜೆ.ರಕ್ಷಿತ್‌ಗೌಡ, ಆರ್.ದಾಕ್ಷಾಯಣಿ ಇತರರು ಇದ್ದರು.