ಮೈಸೂರು: ರಾಯಚೂರಿನಲ್ಲಿ ಗೋರ್ ಬಂಜಾರ ಸಮಾಜದ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಗೋರ್ ಸೇನಾ ಜಿಲ್ಲಾ ಘಟಕದಿಂದ ಅಪಾರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಫೆ.3ರಂದು ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಗೋನವಟ್ಲಾ ತಾಂಡದ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಕ್ರೂರ ಪ್ರಕರಣವಾಗಿದೆ. ಪೊಲೀಸರು ಬಂಧಿಸಿರುವ ಆರೋಪಿಗಳಾದ ಕಾಲೇಜಿನ ಪ್ರಾಂಶುಪಾಲ, ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯಲ್ಲಿ ಬರುವ ಗೋರ್ ಬಂಜಾರ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅಷ್ಟೇ ಅಲ್ಲದೆ, ಇನ್ನಿತರ ಸಮಾಜದ ಅಬಲೆಯರ ಮೇಲೆ ಈ ತರಹದ ಅತ್ಯಾಚಾರಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಂತಹ ಹೀನ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗೋರ್ ಸೇನಾ ಜಿಲ್ಲಾಧ್ಯಕ್ಷ ನಂದಾ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ, ಮುಖಂಡರಾದ ಚಂದ್ರಪ್ರಕಾಶ್ ಮೇಘಾವತ್, ರಾಜೇಶ್ ನಾಯ್ಕ, ಸುಂದರ್ ನಾಯ್ಕ, ಚಂದ್ರ ನಾಯ್ಕ, ಹೇಮಂತ್, ಅನಿಲ್, ಮುನಿಸ್ವಾಮಿ, ಜಯರಾಮ್ ನಾಯ್ಕ, ಓಂಕಾರ್ ನಾಯ್ಕ, ಕೃಷ್ಣನಾಯ್ಕ ಇ್ನತರರಿದ್ದರು.