ತ್ಯಾಗರ್ತಿ: ನಿರಂತರವಾಗಿ ಶಾಲೆಗೆ ಗೈರಾಗಿದ್ದ ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಜಂಬಾನಿ ತಮಿಳರ ಕ್ಯಾಂಪ್ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಪ್ರಯತ್ನ ಮುಂದುವರಿದಿದೆ. ಶಾಲೆ ತೊರೆದಿದ್ದ ರೋಜಾ ಎಂಬ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕರೆತಂದು ಇಡುವಳ್ಳಿ ಸೇಂಟ್ ಆ್ಯಂಟನೀಸ್ ವಸತಿ ಶಾಲೆಗೆ ಸೇರಿಸಲಾಯಿತು.
ಪಾದರಕ್ಷೆ, ಬ್ಯಾಗ್, ನೋಟ್‌ಬುಕ್, ಪೆನ್, ಬೆಡ್‌ಶೀಟ್ ನೀಡಲಾಯಿತು. ಇದರಿಂದ ಪ್ರೇರಣೆಗೊಂಡ ಮತ್ತೊಬ್ಬ ವಿದ್ಯಾರ್ಥಿನಿ ನಾಗರತ್ನ ಶಾಲೆಗೆ ಬರಲು ಆಸಕ್ತಿ ತೋರಿದ್ದಾಳೆ.
ಇದೇ ವೇಳೆ ಮಾತನಾಡಿದ ಸಿಆರ್‌ಪಿ ಸತೀಶ್, ಜಂಬಾನಿ ಕ್ಯಾಂಪ್‌ನ 27ಮಕ್ಕಳಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಪಡೆಯಲು ನಿಯಮಾನುಸಾರ ಕಾನೂನು ಪ್ರಾಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇಲಾಖೆಯ ನಿಯಮಾನುಸಾರ ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬರೂರು ಗ್ರಾಪಂ ಅಧ್ಯಕ್ಷ ಖಂಡೋಜಪ್ಪ, ಸದಸ್ಯ ಮಂಜುನಾಥ, ಇಡುವಳ್ಳಿ ಸೇಂಟ್ ಆಂಟನೀಸ್ ಶಾಲೆ ಮುಖ್ಯಸ್ಥ ಜೋಗಿನ್ ಆಂಟೋನಿ, ಶಿಕ್ಷಕ ಪರಶುರಾಮ, ಬರೂರು ಪಿಡಿಒ ರಾಜು , ಕಾರ್ಯದರ್ಶಿ ಸುರೇಶ್ ಇದ್ದರು.