ಹುಬ್ಬಳ್ಳಿ: ವಿದ್ಯಾರ್ಥಿಗಳು, ಯುವಕರು ಸಾಹಸಿ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಐದು ಟ್ರಿಲಿಯನ್ ಆರ್ಥಿಕತೆ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಕನಸು ನನಸು ಮಾಡಲು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಇಲ್ಲಿಯ ವಿದ್ಯಾನಗರದಲ್ಲಿ ಶನಿವಾರ ಕೆಎಲ್ಇ ಸಂಸ್ಥೆಯ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಈಗ ಅಮೃತ ಮಹೋತ್ಸವ ಆಚರಿಸುತ್ತಿದೆ. ಅನೇಕರು ಬಲಿದಾನಗೈದು ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಸ್ವತಂತ್ರ ಭಾರತದಲ್ಲಿ ನಮಗೆ ಪ್ರಾಣ ನೀಡುವ ಅವಶ್ಯಕತೆ ಇಲ್ಲ. ದೇಶಕ್ಕಾಗಿ ಜೀವನ ನಡೆಸುವ ಅವಶ್ಯಕತೆ ಇದೆ. ತಾಂತ್ರಿಕತೆ ಸೇರಿದಂತೆ ವಿಶ್ವದಲ್ಲಿ ಭಾರತವನ್ನು ಶ್ರೇಷ್ಠ ದರ್ಜೆಯಲ್ಲಿ ನಿಲ್ಲಿಸುವುದು, ಆ ಮೂಲಕ ನವಭಾರತಕ್ಕೆ ಉತ್ತಮ ಜೀವನ ಕಲ್ಪಿಸುವ ಗುರಿ ನಮ್ಮ ಮುಂದಿದೆ ಎಂದು ಮಾರ್ವಿುಕವಾಗಿ ಹೇಳಿದರು.
ಶಿಕ್ಷಣ ವ್ಯಾಪರೀಕರಣವಾಗುತ್ತಿರುವ ಸಮಯದಲ್ಲಿ ಶಿಕ್ಷಕರಿಂದ ಆರಂಭವಾದ ಕೆಎಲ್ಇ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು, ಬಡವರು ಸೇರಿ ಎಲ್ಲ ವರ್ಗದವರಿಗೆ ಶಿಕ್ಷಣ ಪೂರೈಸುತ್ತಿದೆ. 25 ಕೋಟಿ ವೆಚ್ಚದಲ್ಲಿ ಇಲ್ಲಿ ನಿರ್ವಣವಾದ ಒಳಾಂಗಣ ಕ್ರೀಡಾಂಗಣದಿಂದ ಯಾರಾದರೂ ತಯಾರಾಗಿ ಮುಂದಿನ ಒಲಿಂಪಿಕ್ಗೆ ಹೋಗುವ ವಿಶ್ವಾಸವಿದೆ ಎಂದರು.
ಸ್ಟಾರ್ಟ್ಅಪ್ಗಳಿಗೆ ಒತ್ತು ನೀಡಲಾಗಿದೆ. ಅರ್ಹತೆ ಇರುವವರನ್ನು ಕಟ್ಟಿ ಹಾಕಲು ಯಾರಿಗೂ ಸಾಧ್ಯವಿಲ್ಲ. ದೇಶದ ಉತ್ಪಾದನೆ ಹೆಚ್ಚಿಸಲು ಹಲವು ಯೋಜನೆ ತಂದಿದ್ದೇವೆ. ಸಂಶೋಧನೆ, ಹೊಸತನಕ್ಕೆ ಕೈ ಹಾಕಿ. ಮೊದಲೆಲ್ಲ ಸಾವಿರದ ಲೆಕ್ಕದಲ್ಲಿ ಪೇಟೆಂಟ್ಗೆ ಅರ್ಜಿ ಬರುತ್ತಿದ್ದವು. ಅವುಗಳ ಸಂಖ್ಯೆ ಈಗ 1.5 ಲಕ್ಷಕ್ಕೆ ತಲುಪಿದೆ. ಮುದ್ರಾ, ಡಿಜಿಟಲ್ ಇಂಡಿಯಾ, ಖೇಲೋ, ಪಿಟ್ ಇಂಡಿಯಾ ಮುಂತಾದ ಯೋಜನೆಗಳ ಪ್ರಯೋಜನ ಪಡೆಯಿರಿ ಎಂದರು.
ಕರ್ನಾಟಕ ಪ್ರಗತಿಪರ ರಾಜ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬಿ.ವಿ. ಭೂಮರಡ್ಡಿ ಕಾಲೇಜು ಬಹಳಷ್ಟು ಬದಲಾಗಿದೆ. ಈಗಿನ ಸೌಲಭ್ಯಗಳನ್ನು ನೋಡಿದರೆ ಮತ್ತೆ ಇಲ್ಲಿ ವಿದ್ಯಾರ್ಥಿಯಾಗಿ ಬರಬೇಕು ಎನಿಸುತ್ತದೆ ಎಂದು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬೋಂಡಾ ಸೂಪ್ ಸವಿದ ದಿನಗಳನ್ನು ಸ್ಮರಿಸಿದರು. 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲು ಒಂದು ಟ್ರಿಲಿಯನ್ ಇರಬೇಕು ಎಂಬುದು ನಮ್ಮ ಆಶಯ ಎಂದರು. ಮಹಿಳೆಯರ ರಕ್ಷಣೆಗೆ ಗೃಹ ಸಚಿವ ಅಮಿತ್ ಷಾ ಅವರು 700 ಕೋಟಿ ರೂ. ನೀಡಿದ್ದಾರೆ. ಅದರಲ್ಲಿ ಬೆಂಗಳೂರಿಗೆ 400 ಕೋಟಿ ರೂ. ಸಿಕ್ಕಿದೆ ಎಂದರು.
ಭಾರತ ಒಂದು ಎಂದು ಸಾರಿದ ಷಾ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸರ್ದಾರ್ ವಲ್ಲಭಭಾಯ್ ಪಟೇಲ್ ನಂತರ ದೇಶದ ರಕ್ಷಣೆಯ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡವರು ಅಮಿತ್ ಷಾ. ಆರ್ಟಿಕಲ್ 370 ತೆಗೆದುಹಾಕಿ ಭಾರತ ಒಂದು ಎಂದು ಸಾರಿದರು. ಭಯೋತ್ಪಾದಕರು, ನಕ್ಸಲ್ ಹಾವಳಿಯಿಂದ ಮುಕ್ತ ಮಾಡಿದರು ಎಂದರು.
ನಿಸ್ವಾರ್ಥ ದಾನಿ ಭೂಮರಡ್ಡಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಅಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ದೂರದ ಪುಣೆ, ಬೆಂಗಳೂರಿಗೆ ಹೋಗಬೇಕಾಗಿತ್ತು. ಭೂಮರಡ್ಡಿಯವರು ನಿಸ್ವಾರ್ಥವಾಗಿ ನೀಡಿದ ಭೂಮಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿ ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗಿದೆ. ಅದು ಈಗ ವಿಶ್ವವಿದ್ಯಾಲಯ ಆಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪ ಆಗಿರುವುದು ಹೆಮ್ಮೆಯ ಸಂಗತಿ ಎಂದರು.
ಕೆಎಲ್ಇಯಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ: ಪ್ರಾಸ್ತಾವಿಕ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, ಸಂಪೂರ್ಣ ಪ್ರಜಾಸತ್ತಾತ್ಮಕ ವ್ಯವಸ್ಥೆ ಅಡಿ ಕೆಎಲ್ಇ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರಲಾಗಿದೆ. 1,100 ಸದಸ್ಯರಿದ್ದಾರೆ. ಚುನಾವಣೆ ಮೂಲಕ ಆಡಳಿತ ಮಂಡಳಿ ಆಯ್ಕೆ ಮಾಡಲಾಗುತ್ತದೆ ಎಂದರು. ಪ್ರಧಾನಿ ಮೋದಿ ಅವರ ಆಶಯದಂತೆ ದೇಶದ 50 ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ ಕೆಎಲ್ಇಯನ್ನು ತರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಖೇಲೋ ಇಂಡಿಯಾದಡಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು. ಸಂಶೋಧನಾ ಕ್ಷೇತ್ರಕ್ಕೂ ಮಹತ್ವ ನೀಡಿದ್ದೇವೆ ಎಂದರು.
ತಿರುಪತಿಯ ವಿಶ್ವಧರ್ಮ ಚೇತನ ಮಂಚನ ಶ್ರೀ ಬ್ರಹ್ಮಶ್ರೀ ಗುರುದೇವಜೀ ಅವರು ಸಾನ್ನಿಧ್ಯ ವಹಿಸಿದ್ದರು.
ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಮುರಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಇತರರು ಉಪಸ್ಥಿತರಿದ್ದರು. ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ವಂದಿಸಿದರು.