ಭಾರತೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಬಿ.ಕೆ.ಚಿಣ್ಣಪ್ಪ ಉದ್ಘಾಟಿಸಿದರು. 
ಜಿಲ್ಲೆ

ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಲಿ

ಶನಿವಾರಸಂತೆ: ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರ ಉತ್ತಮ ವೃತ್ತಿ ಆಯ್ಕೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕೊಡಗು ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಬಿ.ಕೆ.ಚಿಣ್ಣಪ್ಪ ತಿಳಿಸಿದರು.

ಇಲ್ಲಿನ ಭಾರತೀ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಅಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪದವಿ ಶಿಕ್ಷಣದಲ್ಲಿ ಪರಿಣತಿ ಹೊಂದಿದರೆ ಸಾಲದು. ಬದಲಿಗೆ ಮುಂದಿನ ವೃತ್ತಿ ವಿಚಾರವಾಗಿ ಜಾಗ್ರತೆ ವಹಿಸುವುದು ಉತ್ತಮ. ಪದವಿ ನಂತರ ವಿದ್ಯಾಭ್ಯಾಸ ಮಾಡಬೇಕೋ ಅಥವಾ ವೃತ್ತಿ ಜೀವನಕ್ಕೆ ಹೋಗಬೇಕೋ ಎಂಬ ಗೊಂದಲ್ಲಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಎಚ್.ಎಸ್.ಶರಣ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕಂಪ್ಯೂಟರ್ ಜ್ಞಾನ ಅಗತ್ಯ. ಇದರಲ್ಲಿ ಪರಿಣತಿ ಹೊಂದಿದ್ದರೆ ವಿದ್ಯಾರ್ಥಿಗಳು ಸುಲಭವಾಗಿ ವೃತ್ತಿ ಪಡೆಯಬಹುದು ಎಂದ ಅವರು, ವೃತ್ತಿ ಪಡೆದ ನಂತರವೂ ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಸ್ಥಾನ ಪಡೆಯುವ ಹಂಬಲ ಹೊಂದಬೇಕು ಎಂದರು.

ಭಾರತೀ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಗನ್‌ಪಾಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯುತ್ತೇವೆ ಎಂಬ ಧೃಡ ಸಂಕಲ್ಪ ಹೊಂದಬೇಕು. ಇಂದಿನ ತಂತ್ರಾಜ್ಞಾನ ಯುಗದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಮುಂಚುಣಿಯಲ್ಲಿರುತ್ತಾರೆ. ಅದಕ್ಕೆ ತಕ್ಕಂತೆ ಗ್ರಾಮೀಣ ವಿದ್ಯಾರ್ಥಿಗಳು ಅವರೊಂದಿಗೆ ಸ್ಪರ್ಧೆ ಮಾಡಲು ಸಿದ್ಧರಿರಬೇಕು ಎಂದರು.