ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯಂ ಸಲಹೆ ನೀಡಿದರು.
ನಗರದ ಸೇವಾ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮೇರ ಯುವ ಭಾರತ್ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ತಜ್ಞರಾಗಿದ್ದ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜನಪರವಾದ ಕೆಲಸವನ್ನು ಮಾಡಿದ್ದರು. ಅವರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಾಗಬೇಕಿದೆ. ಸರ್ಕಾರಗಳು ಶಿಕ್ಷಣಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸೇವಾ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಟಿ.ಬಿ.ಲೋಕೇಶ್ ಮಾತನಾಡಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವತಂತ್ರ ಹೋರಾಟಗಾರರಾಗಿದ್ದರು. ನೆಹರು ಸಂಪುಟದಲ್ಲಿ ಉದ್ಯಮ ಹಾಗೂ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಶಿಕ್ಷಣ ತಜ್ಞರಾಗಿ ಹಲವಾರು ಮಹಾನ್ ಸಾಧನೆ ಮಾಡಿದ್ದಾರೆ ಎಮದು ಹೇಳಿದರು.
ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಅನಿತಾ, ಭಾನುಪ್ರಿಯಾ, ಸಿದ್ದರಾಜು, ಮೋಹನ್‌ರಾವ್, ಪ್ರಾಚಿ ಜೈನ್, ಪ್ರೀತಮ್, ಮಾನಸ, ರಾಧಿಕಾ, ಪುನೀತಾ, ಹೇಮಂತ್ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು, ಸೇವಾ ಭಾರತಿ ಶಿಕ್ಷಣ ಸಂಸ್ಥೆ ವಾಸುದೇವರಾವ್, ಮೇರಾ ಯುವ ಭಾರತ್‌ನ ಸಹನಾ, ಕಾಲೇಜಿನ ಉಪನ್ಯಾಸಕರಾದ ಉಮೇಶ್ ನಾಯಕ್, ಮಾದಪ್ಪ, ಮುದ್ದು ಮಾದಪ್ಪ, ಕಾವ್ಯಂಜಲಿ, ಅನ್ನಪೂರ್ಣ ಹಾಗೂ ಇತರರು ಹಾಜರಿದ್ದರು.