ಜಿಲ್ಲೆ

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ

ಚಾಮರಾಜನಗರ: ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಬದಲಾವಣೆಯ ಜಗತ್ತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಸೋಮಶೇಖರ್ ಬಿಸಲವಾಡಿ ಸಲಹೆ ನೀಡಿದರು.

ತಾಲೂಕಿನ ಭೋಗಾಪುರ ಗ್ರಾಮದ ಸಮೀಪದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಸತಿ ಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕೇವಲ ಪರೀಕ್ಷೆ, ಅಂಕಗಳಿಕೆ ಮಾತ್ರ ಶಿಕ್ಷಣವಲ್ಲ. ದೈಹಿಕ ಆರೋಗ್ಯ ಕಾಪಾಡುವ ಕಲಿಕೆಯೂ ಪ್ರಧಾನವಾಗಿದೆ. ಚಾಮರಾಜನಗರ ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದ್ದು, ಶ್ರೀಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಮಹಾಕಾವ್ಯಗಳು ಜಗತ್ತಿಗೆ ಬಹುದೊಡ್ಡ ಕಾವ್ಯವಾಗಿದೆ. ಅಂತಹ ಮಹನೀಯರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಬದುಕಿನ ಆಯಾಮಗಳು ಏಕಾಏಕಿ ಬರುತ್ತದೆ. ಅಂತಹ ವೇದಿಕೆಗಳು ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂದರು.

ಎಸ್ಸಿ, ಎಸ್ಟಿ ವಸತಿ ಸಹಿತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಾಜದ ಅಭಿವೃದ್ಧಿಗೆ ಸಹಕಾರಿಯಾದ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಬಹುಜನರ ಏಳಿಗೆಗೆ ಶ್ರಮಿಸಿದ ಮಹನೀಯರ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನೆಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಯುವಜನಾಂಗ ಮುಂದಾಗಬೇಕು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ವೇಳೆ ಭೋಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪ, ಮಾಜಿ ಉಪಾಧ್ಯಕ್ಷೆ ನಾಗು ಜಯಶಂಕರ್ ಮೂರ್ತಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಂ.ನಂಜುಂಡಯ್ಯ, ಸಹ ಪ್ರಾಧ್ಯಾಪಕರಾದ ಡಾ.ವಿ.ಆರ್.ರಮೇಶ್ ಬಾಬು, ಟಿ.ಆರ್.ಗಿರೀಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಆರ್.ರಂಗಸ್ವಾಮಿ, ಬಿಪಿನ್ ನಾಗರಾಜ್, ಅಧ್ಯಾಪಕಿ ಯಶೋಧಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಟಿ.ಆರ್.ಗಿರಿಜಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.