ಹುಣಸೂರು: ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನಿಸುವ ಮನೋಭಾವ ರೂಢಿಸಿಕೊಂಡಲ್ಲಿ ಮಾತ್ರ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ತಿಳಿಸಿದರು.
ನಗರದ ಗುರುಭವನದಲ್ಲಿ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಶನಿವಾರ ಆಯೋಜಿಸಿದ್ದ ವಿಜ್ಞಾನ ವಿಚಾರಗೋಷ್ಠಿ, ನಾಟಕ ಮತ್ತು ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ಮನೋಭಾವನೆ ಇದ್ದಲ್ಲಿ ಮಾತ್ರ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬಹುದು. ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ವಸ್ತುಪ್ರದರ್ಶನದಲ್ಲಿ ತಾಲೂಕಿನ 65 ಶಾಲೆಗಳಿಂದ 60ಕ್ಕೂ ಹೆಚ್ಚು ವೈವಿಧ್ಯಮಯ ವಿಜ್ಞಾನ ಮಾದರಿಗಳು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಕುತೂಹಲ ತಣಿಸುವಲ್ಲಿ
ಯಶಸ್ವಿಯಾಯಿತು. ಮಳೆಕೊಯ್ಲು ಪದ್ಧತಿ, ಪ್ರವಾಹ ಮುನ್ಸೂಚನೆ ನೀಡುವ ದೀಪ, ಡ್ಯಾಂಗಳ ನಿರ್ಮಾಣದ ಹಿಂದಿರುವ ವಿಜ್ಞಾನ, ನೀರಿನ ಮೇಲ್ಮೈ ಒತ್ತಡದಿಂದ ವಸ್ತುಗಳ ತೇಲುವಿಕೆ ಹೀಗೆ ಹಲವಾರು ಪ್ರಶ್ನೆಗಳಿಗೆ ಮಾದರಿಗಳ ಮೂಲಕ ವಿದ್ಯಾರ್ಥಿಗಳು ಉತ್ತರಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ಬಿಆರ್‌ಇಐಟಿ ತ್ರಿನೇಶ್, ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.