ಜಿಲ್ಲೆ

ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

ಹನೂರು: ತಾಲೂಕಿನ ಲೊಕ್ಕನಹಳ್ಳಿ ಸರ್ಕಾರಿ ಪಬ್ಲಿಕ್ ಶಾಲೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಹಂಪ್ ಅಳವಡಿಸುವಂತೆ ಆಗ್ರಹಿಸಿ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಪಾಲಕರು ದಿಢೀರ್ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆಯ ಮುಂಭಾಗದ ರಸ್ತೆಗೆ ಆಗಮಿಸಿ ವಾಹನ ಸಂಚಾರ ತಡೆದು ಹಂಪ್ ನಿರ್ಮಿಸದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಲಾಖೆಯಿಂದ ಅನುಮತಿ ಪಡೆಯದೆ ಪ್ರತಿಭಟನೆ ನಡೆಸುವಂತಿಲ್ಲ. ಹಂಪ್ ನಿರ್ಮಿಸುವ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ವೇಳೆ ಪಾಲಕರು ಮಾತನಾಡಿ, ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 270 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಕ್ಕೆ ಸೇರಿದವರು. ಇದೀಗ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಶಾಲೆಯ ಮುಂಭಾಗದ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದೆ. ಹಂಪ್ ನಿರ್ಮಿಸದ ಕಾರಣ ವಾಹನಗಳು ವೇಗವಾಗಿ ಓಡಾಡುತ್ತವೆ. ಪರಿಣಾಮ ಕಳೆದ ವಾರ ವಿದ್ಯಾರ್ಥಿಯೊಬ್ಬ ರಸ್ತೆ ದಾಟುವ ವೇಳೆ ಸಂಭವಿಸಿದ ಅಪಘಾತದಿಂದ ಕಾಲು ಮುರಿತಕ್ಕೆ ಒಳಗಾಗಿದ್ದ. ಶಾಲೆ ಮುಂಭಾಗ ಹಂಪ್ ಅಳವಡಿಸುವಂತೆ ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಅಪಘಾತ ಮರುಕಳಿಸಲು ಎಡೆಮಾಡಿ ಕೊಟ್ಟಂತಿದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಒಡೆಯರಪಾಳ್ಯದ ಕಡೆಗೆ ತೆರಳುತ್ತಿದ್ದ ಚನ್ನಾಲಿಂಗನಹಳ್ಳಿ ಜೇತವನದ ಮನೋರಖ್ಖಿತ ಬಂತೇಜಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಪಾಲಕರು ಪ್ರತಿಕ್ರಿಯಿಸಿ, ಒಂದು ವಾರದೊಳಗೆ ಹಂಪ್ ನಿರ್ಮಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಕೈ ಬಿಟ್ಟರು.

ಪ್ರದೀಪ್, ರಾಜು, ನಾಗಚಂದ್ರ, ನಾಗರಾಜು, ರಮೇಶ್, ಚೈತ್ರಾ, ರಂಜಿತಾ, ಶಾಂತಿ, ಸರಳಾ, ಶಿಲ್ಪಾ, ಮಣಿ, ಪವಿತ್ರಾ ಇನ್ನಿತರರು ಇದ್ದರು.