ಅಥಣಿ: ಇಂದಿನ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ನಾಯಕತ್ವ ಗುಣ ಬೆಳೆಸಿಕೊಂಡು, ದೇಶದ ಪ್ರಗತಿಗಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಲು ರೋಟರ‌್ಯಾಕ್ಟ್ ಕ್ಲಬ್ ಉತ್ತಮ ವೇದಿಕೆಯಾಗಿದೆ ಎಂದು ಅಥಣಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿಬಿಎ, ಬಿಸಿಎ ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರೋಟರ‌್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಬೊಮ್ಮಣವರ ಮಾತನಾಡಿ, ವಿದ್ಯಾರ್ಥಿಗಳು ವ್ಯಸನಗಳಿಗೆ ಬಲಿಯಾಗದೆ, ಅವರನ್ನು ಸಮಾಜಮುಖಿ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು ಎಂದರು. ರೋಟರಿ ಕ್ಲಬ್ ಸದಸ್ಯ ಅರುಣ ಯಲಗುದ್ರಿ, ಶ್ರೀಕಾಂತ ಅಥಣಿ ಮಾತನಾಡಿದರು.
ರೋಟರ‌್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಮಹಮ್ಮದ್ ಗದ್ಯಾಳ್, ಕಾರ್ಯದರ್ಶಿಯಾಗಿ ಜುನೇದ್ ಡೊಂಗರಗಾಂವ, ಖಜಾಂಚಿಯಾಗಿ ಸುದರ್ಶನ ಮುತ್ತೂರ ಅಧಿಕಾರ ಸ್ವೀಕರಿಸಿದರು. ರೋಟರಿ ಪದಾಧಿಕಾರಿ ಸುರೇಶ ಪಾಟೀಲ, ಸಚಿನ ದೇಸಾಯಿ, ದೀಪಕ ಪಾಟೀಲ ಇತರರಿದ್ದರು.