ಮೈಸೂರು: ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬೇಡಿ, ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್ ಮಂಜುನಾಥ್ ಸ್ವಾಮಿ ಸಲಹೆ ನೀಡಿದರು.
ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸೋಮವಾರ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಂತ ಶಿವಯೋಗಿಗಳು ಹಳ್ಳಿ ಹಳ್ಳಿಗೆ ಹೋಗಿ ದುಷ್ಚಟಗಳನ್ನು ಬಿಟ್ಟುಬಿಡಿ ಎಂದು ತಿಳಿ ಹೇಳಿ ಜನರ ಮನಃ ಪರಿವರ್ತನೆ ಮಾಡಿಸುತ್ತಿದ್ದರು. ಇಂದೂ ಸಹ ಸ್ವಾಮೀಜಿಗಳು ಮಠಗಳ ಸ್ಥಾಪನೆ ಮಾಡಿ ಶಿಕ್ಷಣ ಮತ್ತು ದಾಸೋಹ ನೀಡುತ್ತಿದ್ದಾರೆ. ದುರ್ಜನರ ಸಹವಾಸ ದುಶ್ಚಟಗಳಿಗೆ ಎಡೆಮಾಡಿಕೊಡುತ್ತದೆ. ಒಳ್ಳೆಯ ಸ್ನೇಹಿತರನ್ನು ಹೊಂದಬೇಕು. ಮನಸ್ಸಿನ ಮೇಲೆ ಹತೋಟಿ ಇರಬೇಕು ಎಂದು ತಿಳಿಸಿದರು.
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಶ್ ಮಾತನಾಡಿ, ದುಶ್ಚಟಗಳಿಗೆ ಒಳಗಾಗುವುದು ಬಹಳ ಸುಲಭ. ಇದರಿಂದ ಹೊರಬರುವುದು ಬಹಳ ಕಷ್ಟ. ಕಾಲೇಜು ಹಂತದಲ್ಲಿ ಶೇ.23ರಷ್ಟು ವಿದ್ಯಾರ್ಥಿಗಳು ಮದ್ಯಪಾನಕ್ಕೆ ಒಳಗಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯ. ಹುಟ್ಟಿನಿಂದ ಯಾರು ವ್ಯಸನಿಗಳಲ್ಲ, ಮದ್ಯ ಸೇವನೆಯೂ ಹಂತಹಂತವಾಗಿ ಮಾನವನ ದೇಹವನ್ನು ನಾಶ ಮಾಡುತ್ತದೆ. ಮದ್ಯಸೇವನೆ ವ್ಯಕ್ತಿಯ ಆಯಸ್ಸನ್ನು ಕಡಿಮೆ ಮಾಡುತ್ತದೆ. ಒಂದು ಸಿಗರೇಟಿನಲ್ಲಿ 3000 ವಿಷಕಾರಕ ಅಂಶಗಳು ಇರುತ್ತವೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಅನಿಟ ವಿಂಲ ಬ್ರಾೃಗ್ಸ್ ಮಾತನಾಡಿ, ಯುವ ವಯಸ್ಸಿನಲ್ಲಿ ಕೆಟ್ಟ ವಿಷಯಗಳಿಗೆ ಆಕರ್ಷಿತರಾಗುವುದು ಅಪಾಯಕಾರಿ. ಯುವಕರು ದಾರಿ ತಪ್ಪಿಸುವ ಜಾಹೀರಾತುಗಳಿಂದ ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ. ದುಶ್ಚಟಗಳಿಗೆ ಯುವಜನತೆ ಒಳಗಾಗಬಾರದು. ಉತ್ತಮ ಅಭ್ಯಾಸ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎನ್.ಎಸ್.ಎಸ್ ಮುಖ್ಯಸ್ಥ ಸುರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಹದೇವ ಪ್ರಸಾದ್ ಇತರರು ಇದ್ದರು.