ಜಿಲ್ಲೆ

ವಿದ್ಯಾರ್ಥಿಗಳು ತಂತ್ರಜ್ಞಾನದ ಕೌಶಲ್ಯ ಬೆಳಸಿಕೊಳ್ಳಬೇಕು

ಬಾಗಲಕೋಟೆ: ಪ್ರಸ್ತುತ ಆಧುನಿಕ ದಿನಮಾನದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಕೌಶಲ್ಯವನ್ನು ಬೆಳಸಿಕೊಳ್ಳಬೇಕು. ತಂತ್ರಜ್ಞಾನದ ಕೌಶಲ್ಯವು ಉನ್ನತ ವ್ಯಾಸಂಗ ಮಾಡಲು ಹಾಗೂ ಸಂಶೋಧನಗೆ ಬೇಕಾದ ಮಾಹಿತಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ರವಿ ಕರಿಬಾಶೆಟ್ಟಿ ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಕೌಶಲ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಮಾಹಿತಿ ವಿಶ್ಲೇಷಣೆ ಮತ್ತು ಸಂಸ್ಕರಿಸುವುದು ಕಲಿಯಬೇಕು. ಬೇರೆ ಬೇರೆ ಪ್ರದೇಶಗಳಲ್ಲಿರುವ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳಬೇಕಾದರೆ ತಂತ್ರಜ್ಞಾನದ ಕೌಶಲ್ಯ ತಿಳಿದಿರಬೇಕು. ತಮ್ಮ ಅಧ್ಯಯನಕ್ಕೆ ಪೂರಕವಾದ ಕೆಲವು ಪ್ರಮುಖ ಪಠ್ಯಗಳನ್ನು ಬೇರೆ ಬೇರೆ ಗ್ರಂಥಾಲಯದಲ್ಲಿ ಲಭ್ಯ ಇದ್ದರೆ ಅವುಗಳನ್ನು ಸಹ ತಂತ್ರಜ್ಞಾನದ ಕೌಶಲ್ಯದ ಮೂಲಕ ಬಳಸಿಕೊಂಡು ಸಂವಹನ ಮಾಡಿಕೊಂಡರೆ ಅಧ್ಯಯನದಲ್ಲಿ ಹೊಸ ಆಯಾಮ ದೊರೆಯುತ್ತದೆ ಎಂದರು.

ಪ್ರಾಚಾರ್ಯ ಡಾ. ಅರುಣಕುಮಾರ್ ಗಾಳಿ ಮಾತನಾಡಿ, ಇಪ್ಪತ್ತೊಂದನೆಯ ಶತಮಾನದಲ್ಲಿ ತಂತ್ರಜ್ಞಾನವು ವ್ಯಾಪಕವಾಗಿ ಬೆಳೆದಿದ್ದು, ಅದರ ಸದುಪಯೋಗವನ್ನು ಇಂದಿನ ವಿದ್ಯಾರ್ಥಿಗಳು ಪಡೆದುಕೊಂಡು, ಮಾಹಿತಿ ಸಂವಹನ ತಂತ್ರಜ್ಞಾನ ಕೌಶಲದ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ದೊರೆಯುವ ಸಂಪನ್ಮೂಲಗಳನ್ನು, ವಿಷಯಗಳನ್ನು ಸಂಗ್ರಹಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಕೌಶಲ ಬಳಕೆ ಮಾಡಿಕೊಂಡರೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರೊ.ಸಾಗರ ಚಿಂಗಳಿ, ಪ್ರೊ.ಸುನಂದಾ ಬೂದಿಹಾಳ ಉಪಸ್ಥಿತರಿದ್ದರು. ಸವಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಸ್ನೇಹ ಕಾಳೆ ಸ್ವಾಗತಿಸಿದರು, ಮಾನಂದಾ ಯಮನಾಳ, ಶಿಲ್ಪಾ ಹುಲಸದ ನಿರೂಪಿಸಿದರು. ಪ್ರಸನ್ನ ಕರವೀರಮಠ ವಂದಿಸಿದರು.