ಸೋಮವಾರಪೇಟೆ: ನಿರಂತರ ಬದಲಾವಣೆ ಮತ್ತು ಸುಧಾರಣೆಯಾಗುತ್ತಿರುವ ವಿದ್ಯುನ್ಮಾನ ವಲಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಾದ ಜ್ಞಾನ, ಶಿಸ್ತನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ ಎಂದು ಅಮೆರಿಕ ಕಂಪನಿಯ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಎ.ಎಂ.ಮಂಜುನಾಥ್ ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕಿನ ಚೌಡ್ಲು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಕಾರ್ಯಾಗಾರ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತತ ಪರಿಶ್ರಮದಿಂದ ಮಾತ್ರ ದೊಡ್ಡ ಸಾಧನೆ ಮಾಡಲು ಸಾಧ್ಯ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಮುನ್ನಡೆಯುತ್ತಿರುವ ಭಾರತದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳೂ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನಾಧಾರಿತ ಔಧ್ಯಮಿಕ ಕ್ಷೇತ್ರದಲ್ಲಿ ಸಿಗುತ್ತಿವೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡಲೇಬೇಕಾದ ಅನಿವಾರ್ಯತೆಯಿದ್ದು, ಸಮಯವನ್ನು ವ್ಯರ್ಥ ಮಾಡದೆ ಕಲಿಯಬೇಕು ಎಂದು ಹೇಳಿದರು.
ಪ್ರಪಂಚದಲ್ಲಿ ತಂತ್ರಜ್ಞಾನದ ಪ್ರಗತಿ ಅಡೆತಡೆಗಳಿಲ್ಲದೆ ಆಗುತ್ತಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ವಿಷಯದ ಅಧ್ಯಯನಕ್ಕೆ ಎಲ್ಲ ಸೌಲಭ್ಯಗಳು ಲಭ್ಯವಿವೆ. ಅಭಿರುಚಿಗೆ ತಕ್ಕದಾದ ಶಿಕ್ಷಣ ಸಂಸ್ಥೆಗಳು ಸಿಗುತ್ತವೆ. ಜ್ಞಾನ ಸಂಪಾದಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಪಡೆಯಬಹುದು. ಕಂಪ್ಯೂಟರ್ ಶಿಕ್ಷಣ ಕಲಿತುಕೊಳ್ಳಬೇಕು. ಜತೆಯಲ್ಲಿ ಗೂಗಲ್ ಸರ್ಚ್, ಚಾಟ್ ಜಿಪಿಟಿಯನ್ನು ಬಳಸಿಕೊಂಡು ಕಲಿಕೆ ಉತ್ತಮಪಡಿಸಿಕೊಳ್ಳಿ. ಬಿಎಸ್‌ಸಿ, ಬಿಕಾಂ, ಬಿಎ ವ್ಯಾಸಂಗದಲ್ಲಿ ಉತ್ತಮ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ, ಇಂಜಿನಿಯರಿಂಗ್‌ನಲ್ಲಂತೂ ಅನೇಕ ತತ್ರಜ್ಞಾನದ ವಿಷಯಗಳಿವೆ. ಜ್ಞಾನ ಸಂಪಾದಿಸಿಕೊಂಡವರಿಗೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ನೌಕರಿ ಪಡೆದುಕೊಳ್ಳುವ ಅವಕಾಶವಿದೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ರಾಜ್ಯಮಟ್ಟದಲ್ಲೂ ರ‌್ಯಾಂಕ್‌ಗಳನ್ನು ಪಡೆಯುವ ಮೂಲಕ ಈಗ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಬಾತ್ಮೀದಾರ ಕೆ.ಎಂ.ಜಗದೀಶ್ ಮಾತನಾಡಿ, ಶಿಕ್ಷಣದಲ್ಲಿ ಬದುಕಿನ ಮೌಲ್ಯವನ್ನು ಕಲಿತುಕೊಳ್ಳುವುದರ ಮೂಲಕ ಗುರಿಯೊಂದಿಗೆ ಸಾಧನೆಯ ಮೆಟ್ಟಿಲೇರಬೇಕು ಎಂದು ಹೇಳಿದರು.
ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ಕಾರ್ಯದರ್ಶಿ ಎನ್.ಬಿ.ಗಣಪತಿ, ನಿರ್ದೇಶಕರಾದ ಕೆ.ಎಸ್.ರಾಮಚಂದ್ರ, ಜಿ.ಪಿ.ಲಿಂಗರಾಜು, ಕೆ.ಟಿ.ಪರಮೇಶ್, ಎಂ.ಎಸ್.ನಂದಕುಮಾರ್, ಡಿ.ಎಸ್.ಚಂಗಪ್ಪ, ಪ್ರಾಂಶುಪಾಲರಾದ ಮಿಲ್‌ಗ್ರೆಡ್ ಗೋನ್ಸಾಲ್ವೆಸ್ ಇದ್ದರು.
ವಿದ್ಯಾರ್ಥಿಗಳಾದ ಅಪಾನ್, ಶಿಫಾ, ಎಚ್.ಆರ್.ಜೀವಿತಾ, ಮೊನಿಷಾ, ಭಾನುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು. ಬೃಂದಾ ಮತ್ತು ಪ್ರಿತೇಶ್ ಅದೃಷ್ಟವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.