ಹಾಸನ: ಪಿ.ಯು. ಹಂತದಲ್ಲಿ ವಿದ್ಯಾರ್ಥಿಗಳಿಗೆ ಭೌದ್ಧಿಕ ಹಾಗೂ ಮಾನಸಿಕವಾಗಿ ಹಲವು ಬದಲಾವಣೆಗಳು ಉಂಟಾಗುತ್ತವೆ, ಈ ಹಂತದಲ್ಲಿ ಯುವಕ-ಯುವತಿಯರು ತಮ್ಮ ಜೀವನದ ಗುರಿ ಸಾಧಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ರೋಟರಿ ಕ್ಲಬ್‌ನ ಆರ್.ಐ. 3182 ಡಿ.ಜಿ. ನಾಮ ನಿರ್ದೇಶಿತ ಪಾಲಾಕ್ಷ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಬೆಸ್ಟ್ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಬೆಸ್ಟ್ ಸಂಭ್ರಮ 2ಕೆ23-24 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೌಢ ಶಿಕ್ಷಣ ಕಲಿಕೆಯಿಂದ ಪಿಯು ಹಂತದ ಕಲಿಕೆಗೆ ಬರುವ ಮಕ್ಕಳಲ್ಲಿ ಹಲವು ಬದಲಾವಣೆಗಳು ನಾವುಗಳು ಕಾಣಬಹುದಾಗಿದ್ದು, ಈ ಹಂತದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವು ಬದಲಾವಣೆಗಳನ್ನು ಕಾಣುತ್ತಾರೆ ಎಂದರು.
ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಈ ಹಂತದಲ್ಲಿ ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡಬೇಕಾದ ಜವಬ್ದಾರಿ ಇರುತ್ತದೆ. ತಾವು ಕಲಿಯುವ ವಿಷಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ, ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ಸರಿಯಾಗಿ ಅರಿತು ಕಲಿಯುವುದರಿಂದ ವಿಷಯ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದ ಮಕ್ಕಳು ಬೌದ್ಧಿಕವಾಗಿ ಹೆಚ್ಚು ಮುಂದಿರುತ್ತಾರೆ, ಹಾಗಾಗಿ ಅವರುಗಳು ಸಾಧನೆಯಲ್ಲಿ ಮುಂದಿರುತ್ತಾರೆ ಎಂದು ಹೇಳಿದರು.
ಪಟ್ಟಣದ ಮಕ್ಕಳು ನಮಗೆ ಎಲ್ಲಾವು ಗೊತ್ತಿದೆ ಎಂಬ ತಪ್ಪು ಕಲ್ಪನೆಯಿಂದ ಹಲವು ಬಾರಿ ಎಡವುತ್ತಾರೆ. ಎಸ್.ಎಸ್.ಎಲ್.ಸಿ. ಹಂತದಿಂದ ಪಿಯು ಹಂತಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೊಸ ಕಲಿಕಾ ಹಂತಕ್ಕೆ ಹೊಂದಿಕೊಳ್ಳಬೇಕಾಗಿರುತ್ತದೆ. ಹಾಗಾಗಿ ಪಿಯು ಹಂತದಿಂದ ಬದಲಾಗುವ ಹೊಸ ಹಂತದ ಕಲಿಕಾ ಪದ್ಧತಿಯನ್ನು ಯಾವ ವಿದ್ಯಾರ್ಥಿ ಬೇಗ ಕರಗತ ಮಾಡಿಕೊಳ್ಳುತ್ತಾರೊ ಅವರು ಆದಷ್ಟು ಬೇಗ ಶೈಕ್ಷಣಿಕವಾಗಿ ಮುಂದೆ ಸಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಪಿ.ಎಸ್. ಮಂಜೇಗೌಡ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಸಲುವಾಗಿ ಕಾಲೇಜಿನ ಅಧ್ಯಾಪಕರು ನಿರಂತರವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಬೆಸ್ಟ್ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಹಲವು ಹೊಸತನಗಳನ್ನು ಅಳವಡಿಸಿಕೊಂಡು ಬೋಧನೆ ಮಾಡುತ್ತಿದೆ. ವಿದ್ಯಾರ್ಥಿಗಳು ಪಿಯು ಹಂತದಲ್ಲಿ ಆಸಕ್ತಿಯಿಂದ ಶಿಕ್ಷಣವನ್ನು ಕಲಿಯಬೇಕಾದ ಅವಶ್ಯಕತೆ ಇದೆ. ಪೋಷಕರು ಈ ಹಂತದಲ್ಲಿ ತಮ್ಮ ಮಕ್ಕಳನ್ನು ನಿಗಾ ವಹಿಸಿ ಅವರುಗಳನ್ನು ಶಿಕ್ಷಣ ಒದಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬೆಸ್ಟ್ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಆರ್. ಮಧು, ಹಾಸನಾಂಬ ರೂರಲ್ ಎಜುಕೇಷನ್ ಟ್ರಸ್ಟ್ ನ ಖಜಾಂಚಿ ವೈ.ಎಚ್. ಈಶ್ವರಪ್ಪ, ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನವೀನ್, ಬೆಸ್ಟ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಬಿ. ವಿಕ್ರಂ, ಡಾ.ಎಂ.ಡಿ. ನಿತ್ಯಾನಂದ ಹಾಗೂ ಇತರರು ಇದ್ದರು.