ಜಿಲ್ಲೆ

ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಲಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಆರ್ಥಿಕವಾಗಿ ಬೆಳೆಯಬೇಕಾದರೆ ಅದಕ್ಕೆ ಪೂರಕವಾದ ಕೌಶಲ ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎ.ಶೇಖರ್ ಹೇಳಿದರು.

ಮಹಾಜನ ವಿದ್ಯಾಸಂಸ್ಥೆಯ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಶೈಕ್ಷಣಿಕ ಸಾಲಿನ 4ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಮಗೆ ಓಡುವುದಕ್ಕೆ ಆಗುವುದಿಲ್ಲ ಎಂದರೆ ನಡೆಯಿರಿ, ನಡೆಯುವುದಕ್ಕೆ ಆಗದಿದ್ದರೆ ತೆವಳಿಕೊಂಡು ಹೋಗಿ. ಆದರೆ, ಮುಂದೆ ಹೋಗುವುದನ್ನು ಮಾತ್ರ ನಿಲ್ಲಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮನುಷ್ಯನಿಗೆ ದುರಾಸೆ ಇರಬಾರದು. ಹಣವೇ ಎಲ್ಲವನ್ನೂ ತಂದುಕೊಡುವುದಿಲ್ಲ. ಮಾನವೀಯತೆ, ಸಮಯ ಮುಖ್ಯವಾಗುತ್ತದೆ. ಬದುಕು ಎಲ್ಲವನ್ನೂ ಕಲಿಸುತ್ತಾ ಹೋಗುತ್ತದೆ. ನಮ್ಮ ಮನೆಗಳನ್ನು ನಾವು ಮರೆಯಬಾರದು ಎಂದರು.

ಆಧ್ಯಾತ್ಮಿಕತೆ, ಭಕ್ತಿಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಇದರಿಂದ ಬದುಕಿನ ದೃಷ್ಟಿಕೋನ ವಿಸ್ತಾರವಾಗುತ್ತದೆ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಎಲ್ಲರಿಗೂ ಅವರದ್ದೇ ಆದ ಸಾಮರ್ಥ್ಯ ಇರುತ್ತದೆ. ಮೊಗದಲ್ಲಿ ಯಾವಾಗಲೂ ನಗುವಿರಬೇಕು. ಅದು ಆರೋಗ್ಯಕ್ಕೆ ಮುಖ್ಯ. ನಮ್ಮ ಮೊದಲ ದೇವರು ತಂದೆ-ತಾಯಿಯಾದರೆ ನಂತರದ ಸ್ಥಾನದಲ್ಲಿ ಗುರುಗಳು ಬರುತ್ತಾರೆ. ದೇವರ ಸ್ಥಾನದಲ್ಲಿ ತಂದೆ-ತಾಯಿಗಳು, ಗುರುಗಳು ನಿಲ್ಲುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ನಾವು ಮರೆಯಬಾರದು ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕನ್ನಡದ ವರನಟ ಡಾ.ರಾಜಕುಮಾರ್ ಅವರ ಅಭಿನಯದ ‘ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ’ ಹಾಡನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಪದವಿ ಮುಗಿದ ತಕ್ಷಣ ಕಲಿಕೆ ನಿಲ್ಲುವುದಿಲ್ಲ. ಇಲ್ಲಿಂದ ಬದುಕು ಆರಂಭವಾಗುತ್ತದೆ. ಪ್ರತಿ ದಿನ ಹೊಸ ವಿಚಾರ ಕಲಿಯುತ್ತಾ ಹೋಗಬೇಕು ಎಂದು ಹೇಳಿದರು.

ಕೆಲಸ ಮಾಡುವ ಹಂಬಲವಿದ್ದರೆ, ನಿರಂತರವಾಗಿ ಕೆಲಸ ಸಿಗುತ್ತಲೇ ಹೋಗುತ್ತದೆ. ನೀವು ಬೆಳೆಯುತ್ತಾ ಹೋಗುತ್ತೀರ. ಹಿರಿಯರ ಅನುಭವದ ಮಾತು ಅಳವಡಿಸಿಕೊಂಡರೆ ಬದುಕು ನಡೆಸಲು ಸಾಧ್ಯ ಎಂದರು.

ಕೈಗೆ ಸ್ಮಾರ್ಟ್‌ಫೋನ್ ಬಂದಾಗಿನಿಂದ ಆಲೋಚನಾ ಶಕ್ತಿ ಕಡಿಮೆಯಾಗಿದೆ. ಒಂದು ವಿಷಯದಲ್ಲಿ ಪರಿಣಿತಿ ಪಡೆಯುವುದರ ಜತೆಗೆ ಸಮಯಪ್ರಜ್ಞೆ, ಆತ್ಮವಿಶ್ವಾಸ ಇರಬೇಕು. ವಿದ್ಯೆ ಎಂಬುದು ಕೇವಲ ಜ್ಞಾನವಲ್ಲ. ಪ್ರತಿ ದಿನ ನಮ್ಮನ್ನು ನಾವು ಅಭಿವೃದ್ಧಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಧನಾತ್ಮಕ ಚಿಂತನೆ ಹಾಗೂ ವ್ಯಕ್ತಿತ್ವ ಮುಖ್ಯವಾಗುತ್ತದೆ ಎಂದು ಹೇಳಿದರು.

ಪದವಿ ಮತ್ತು ಸ್ನಾತಕೋತ್ತರ ಪದವಿ ಒಂದು ಹಂತವಾದರೆ, ಇನ್ನೂ ಮುಂದೆ ಹೊಸ ಸವಾಲುಗಳಿಗೆ ಮುಖಾಮುಖಿಯಾಗುತ್ತೀರಾ. ಇದುವರೆಗಿನ ಓದು ನಿಮ್ಮ ವ್ಯಕ್ತಿತ್ವ ಬದಲಾಯಿಸಿ, ಅದರ ಮೂಲಕ ಬದುಕಿನ ಸವಾಲು ಎದುರಿಸಲು ಸಿದ್ಧಗೊಳಿಸಿದೆ. ವಿದ್ಯಾಭ್ಯಾಸದ ಹಂತದಲ್ಲಿ ಕಲಿತ ಮೌಲ್ಯ ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂದು ಪದವೀಧರರಿಗೆ ತಿಳಿಸಿದರು.

ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ಶೇ.95ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿ, ಪದವಿ ಪಡೆದ ಮಾತ್ರಕ್ಕೆ ಕಲಿಕೆ ಇಲ್ಲಿಗೆ ನಿಲ್ಲುವುದಿಲ್ಲ. ಕಲಿಕೆ ಎಂಬುದು ನಿರಂತರವಾದದ್ದು ಎಂದು ನುಡಿದರು.

ಪ್ರಾಂಶುಪಾಲೆ ಡಾ.ಬಿ.ಆರ್. ಜಯಾಕುಮಾರಿ, ಶೈಕ್ಷಣಿಕ ಡೀನ್ ಡಾ.ಎಚ್.ಶ್ರೀಧರ, ನ್ಯಾಕ್ ಸಂಯೋಜಕಿ ಡಿ.ಗೀತಾ, ಪ್ರಾಧ್ಯಾಪಕರಾದ ಭ್ರಮರ ಉಡುಪ, ಕೆ.ಚಂದನಾ, ಪರೀಕ್ಷಾ ನಿಯಂತ್ರಣಾಧಿಕಾರಿ ಶ್ರುತಿ ಪೂಣಚ್ಚ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಸಿ.ಕೆ.ರೇಣುಕಾರ್ಯ, ಮಹಾಜನ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಿ.ಎಸ್.ರವಿಕುಮಾರ್, ಖಜಾಂಚಿ ವಿಜಯಕಮಾರ್, ಆಡಳಿತಾಧಿಕಾರಿ ಪ್ರೊ.ಪಿ.ಸರೋಜಮ್ಮ, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಕಾರ್ಯಕ್ರಮದ ಸಂಚಾಲಕ ಡಾ. ಎಚ್.ಆರ್.ತಿಮ್ಮೇಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ವರ್ಷದ ಸ್ನಾತಕ ಪದವಿ ವಿಭಾಗದ ಬಿ.ಎ, ಬಿ.ಕಾಂ., ಬಿಬಿಎ, ಬಿಸಿಎ, ಬಿಎಸ್ಸಿ ಹಾಗೂ ಬಿಬಿಎ ಸೇರಿದಂತೆ 288 ವಿದ್ಯಾರ್ಥಿಗಳು (116 ಯುವಕರು, 172 ಯುವತಿಯರು) ಪದವಿ ಪಡೆದರು. 29 ವಿದ್ಯಾರ್ಥಿಗಳು ಪದಕದೊಂದಿಗೆ ನಗದು ಬಹುಮಾನ ಪಡೆದರು. ಸ್ನಾತಕೋತ್ತರ ಪದವಿ ವಿಭಾಗದ ಎಂಬಿಎ, ಎಂಸಿಎ, ಎಂ.ಕಾಂ, ಎಂಎಸ್‌ಡ್ಲ್ಯೂ, ಎಂಎಸ್ಸಿ ಕೆಮಿಸ್ಟ್ರಿ, ಎಂಎಸ್ಸಿ ಬಯೋಕೆಮಿಸ್ಟ್ರಿ, ಎಂಎಸ್ಸಿ ಬಯೋಟೆಕ್ನಾಲಜಿ, ಎಂಎಸ್ಸಿ ಮೈಕ್ರೋಬಯಾಲಜಿ ಹಾಗೂ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ 9 ಕೋರ್ಸ್‌ಗಳಲ್ಲಿ 337 ವಿದ್ಯಾರ್ಥಿಗಳಿಗೆ (173 ಯುವಕರು, 164 ಯುವತಿಯರು) ಪದವಿ ಪ್ರದಾನ ಮಾಡಲಾಯಿತು. 18 ವಿದ್ಯಾರ್ಥಿಗಳಿಗೆ ಪದಕ ಹಾಗೂ ನಗದು ಬಹುಮಾನವನ್ನು ನೀಡಿ, 4 ವಿದ್ಯಾರ್ಥಿಗಳಿಗೆ ದತ್ತಿ ನಗದು ಬಹುಮಾನ ವಿತರಿಸಲಾಯಿತು. ಪದವಿ ಪ್ರದಾನ ಸಮಾರಂಭಕ್ಕೆ ಪೂರ್ಣಕುಂಭ ಹಾಗೂ ಎನ್‌ಸಿಸಿ ಗಾರ್ಡ್ ಆಫ್ ಆನರ್‌ನೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು.