ಜಿಲ್ಲೆ

ವಿದ್ಯಾರ್ಥಿಗಳು ಆರೋಗ್ಯ ಬಗ್ಗೆ ಜಾಗೃತಿ ವಹಿಸಿ

ಚಾಮರಾಜನಗರ: ಶಿಕ್ಷಣ ಹಾಗೂ ಸೇವಾ ಕಾರ್ಯಕ್ರಮದ ಜತೆಗೆ ವಿದ್ಯಾರ್ಥಿಗಳು ಆರೋಗ್ಯದ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಧಿಕಾರಿ ಡಾ.ಆರ್.ಮಹೇಶ್ ಸಲಹೆ ನೀಡಿದರು.

ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡೆ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ನಿಂದ ಸಾವಿರಾರು ಜನರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಬಳಸಿ, ತಮ್ಮ ಆರೋಗ್ಯ ಬಗ್ಗೆ ಗಮನ ಹರಿಸಬೇಕು ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಹಾಗೂ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಲವಾರು ಸಾಧನೆ ಮಾಡುತ್ತಿದ್ದಾರೆ. ಎನ್ಎಸ್ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ವೀರೇಶ್, ಮಣಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.