ಜಿಲ್ಲೆ

ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬಿಡುಗಡೆಗೊಳಿಸಿ


ಯಾದಗಿರಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಬಡ ವರ್ಗದ ವಿದ್ಯಾರ್ಥಿಗಳಿಗೆ ಕೂಡಲೇ ಸರಕಾರ ಶಿಷ್ಯ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಐಡಿಎಸ್ಒ ಸಂಘಟನೆಯಿಂದ ಮಂಗಳವಾರ ಇಲ್ಲಿನ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ., ಮಾತನಾಡಿ, ಪರಿಶಿಷ್ಟ ಜಾತಿ,ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸೇರಿ ಹಲವು ವಿಭಾಗಗಳ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಸರಕಾರ ಸ್ಕಾಲರ್ಶಿಪ್ ಮಂಜೂರು ಮಾಡಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಹಾಕಿದ್ದ ವಿದ್ಯಾರ್ಥಿ ವೇತನಗಳು ಇಲ್ಲಿಯವರೆಗೂ ಕೂಡ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ಇನ್ನು ಕೆಲವು ದಿನಗಳ ಹಿಂದಷ್ಟೆ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯ ವೇತನವನ್ನು ಕೂಡಾ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.

ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5 ಸಾವಿರದಿಂದ 60 ಸಾವಿರದ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು 1100 ರಿಂದ 11,000ಕ್ಕೆ ಇಳಿಸಲಾಗಿದೆ. ಈಗಾಗಲೇ ಎಲ್ಲ ಹಂತದ ಶಿಕ್ಷಣ ವ್ಯಾಪಾರಿಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರಕಾರದ ಶಿಷ್ಯ ವೇತನವು ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ ಬಡ ವಿದ್ಯಾರ್ಥಿಗಳು ಪಿಯಸಿ,ಪದವಿ ಸೇರಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ನಂಥ ಉನ್ನತ ವ್ಯಾಸಂಗ ಕೂಡ ಪಡೆಯಬಹುದಾಗಿದೆ ಎಂದರು.

ಕಾರ್ಮಿಕ ನಿಧಿಯಲ್ಲಿ ಹಣ ಹೇರಳವಾಗಿ ಸಂಗ್ರಹವಾಗುತ್ತಿದೆ. ಇದು ಕಾಮರ್ಿಕರ ಬೆವರಿನ ಫಲ. ಮತ್ತು ಇದನ್ನು ಸಂಪೂರ್ಣವಾಗಿ ಅವರ ಏಳಿಗೆಗೆ ಬಳಸಬೇಕು. ಸರಕಾರವು ಈ ಕುರಿತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.