ಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಿಸಲಾಯಿತು. ಶಿವಾನಂದ್, ಜೀನತ್, ಸುಷ್ಮಾ, ರುದ್ರೇಶ್ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಣೆ

ಕೊಪ್ಪ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎನ್.ಆರ್.ಪುರ ತಾಲೂಕಿನ ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರು ಉಚಿತವಾಗಿ ನೀಡಿದ ಶಾಲಾ ಸಮವಸ್ತ್ರ, ಟ್ರ್ಯಾಕ್‌ಸೂಟ್, ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವಿದ್ಯಾನಂದ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡರೆ ಸಂಪಾದನೆ ಅರಸಿಕೊಂಡು ಬರುತ್ತದೆ. ಇದೇ ಗದ್ದೆಮನೆ ವಿಶ್ವನಾಥ್ ಅವರ ಸಾಧನೆಯ ರಹಸ್ಯ ಎಂದು ತಿಳಿಸಿದರು. ಎಸ್‌ಡಿಎಂಸಿ ಸದಸ್ಯ ಸಿ.ಎಚ್.ಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತು ವಕೀಲರಾಗಿ, ಉದ್ಯಮಿಯಾಗಿ ನಿಸ್ವಾರ್ಥ ಮನೋಭಾವದಿಂದ ಕೊಡುಗೆ ನೀಡುತ್ತಿರುವ ವಿಶ್ವನಾಥ್ ಗದ್ದೆಮನೆ ಅವರು 850ಕ್ಕೂ ಅಧಿಕ ಶಾಲೆಗಳಿಗೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಶಾಲಾ ಸಾಮಗ್ರಿ ವಿತರಿಸುತ್ತಿದ್ದಾರೆ ಎಂದರು. ಜಿನೇಶ್ ಇರ್ವತ್ತೂರು ಅವರು ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಿದರು. ಎಸ್‌ಡಿಎಂಸಿಯ ಶಿವಾನಂದ್, ಉಪಾಧ್ಯಕ್ಷೆ ಜೀನತ್, ಸುಷ್ಮಾ, ನಾಗರಾಜ್ ಪವಾರ್, ಮುಖ್ಯಶಿಕ್ಷಕ ರುದ್ರೇಶ್ ಇದ್ದರು.