ಮೈಸೂರು: ಕೇವಲ ಮಾಹಿತಿ ನೀಡುವುದು ಶಿಕ್ಷಣವಲ್ಲ. ಮಾಹಿತಿ, ವಿಶ್ಲೇಷಣೆ, ವ್ಯಾಖ್ಯಾನ ಈ ಮೂರು ಸ್ತರಗಳಲ್ಲಿ ಜ್ಞಾನದ ವಿಸ್ತರಣೆಯಾಗಬೇಕು ಎಂದು ಲೇಖಕ, ಚಿಂತಕ ಪ್ರೊ.ರಹಮತ್ ತರೀಕೆರೆ ಹೇಳಿದರು.
ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬೋಧನೆ-ಕಲಿಕೆ: ಸಮಕಾಲೀನ ಸಂದರ್ಭ ಮತ್ತು ಸವಾಲುಗಳು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಐಎಎಸ್, ಕೆಎಎಸ್ ಅಧಿಕಾರಿಗಳು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಉದ್ಯೋಗ ಪಡೆಯುತ್ತಿದ್ದಾರೆ. ಅವರಿಗೆ ವಿಶ್ಲೇಷಣೆ ಮತ್ತು ವ್ಯಾಖ್ಯಾನದ ಅರಿವಿಲ್ಲ. ಹೀಗಾಗಿ ಅವರು ಆಡಳಿತ ನಡೆಸುವಲ್ಲಿ ಸೋಲುತ್ತಿದ್ದಾರೆ. ಬೋಧನೆ ಯಾವಾಗಲೂ ಸಂವಾದದ ರೂಪದಲ್ಲಿರಬೇಕು, ಏಕಮುಖ ಸಂವಹನವಾಗಬಾರದು ಎಂದು ತಿಳಿಸಿದರು.
ಶಿಕ್ಷಕರು ಕಲಿಸುವವರಲ್ಲದೆ ಕಲಿಯುವ ಗುರುಗಳಾಗಬೇಕು. ಬೋಧನೆಯಲ್ಲಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ವಿಸ್ಮಯ ಮೂಡಿಸಿ ಬೋಧನೆ ಮಾಡಬೇಕು. ನಾಡಗೀತೆ ಮತ್ತು ರಾಷ್ಟ್ರಗೀತೆಯಲ್ಲಿ ಅದ್ವೈತ ಸಿದ್ಧಾಂತವಿದ್ದು, ಒಳಗೊಳ್ಳುವ ಸಂಸ್ಕೃತಿಯನ್ನು ಈ ಗೀತೆಗಳು ಪ್ರತಿಬಿಂಬಿಸುತ್ತವೆ ಎಂದರು.
ಪ್ರಸ್ತುತ ದಿನಗಳಲ್ಲಿ ಯಾವುದಾದರು ಒಂದು ಜ್ಞಾನ ಶಾಖೆಯ ಬಗ್ಗೆ ತಿಳಿದಿದ್ದರೆ ಸಾಲದು. ಎಲ್ಲ ಜ್ಞಾನ ಶಾಖೆಗಳ ಪರಿಚಯ ಶಿಕ್ಷಕರಿಗೆ ಇರಬೇಕಿದೆ ಎಂದು ಹೇಳಿದರು.
ಪ್ರತಿ ಸಮುದಾಯ ಕೌಶಲ ಆಧಾರಿತವಾಗಿದೆ. ಯಾವುದಾದರೂ ಒಂದು ಕೌಶಲವನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತದೆ. ಎಲ್ಲ ಸಮುದಾಯವೂ ಕಾಲಕ್ಕೆ ತಕ್ಕಂತೆ ಕೆಲವು ಬಿಕ್ಕಟ್ಟು ಎದುರಿಸುತ್ತವೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತವೆ.
ಉದಾಹರಣೆಗೆ ಕುಂಬಾರಿಕೆ ಮಡಿಕೆ ಮಾಡುವ ಸಮುದಾಯ ಮಡಿಕೆಯನ್ನು ಜನ ಕೊಳ್ಳುವುದನ್ನು ನಿಲ್ಲಿಸಿದಾಗ ಆ ಸಮುದಾಯ ಹೂ ಕುಂಡಗಳನ್ನು ತಯಾರಿಸಿ ಮಾರುವುದನ್ನು ರೂಢಿಸಿಕೊಂಡು ತಮ್ಮ ಜೀವನ ನಿರ್ವಹಿಸುತ್ತಿದೆ. ಹಾಗೆ ಶಿಕ್ಷಕ ಕೂಡ ತರಗತಿ ಹಿಂದಿನ ವಾತಾವರಣಕ್ಕೆ ಬೇಕಾದ ಕೌಶಲವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಯುಗಾದಿ ಮತ್ತು ರಂಜಾನ್ ಎರಡು ಹಬ್ಬಗಳು ಒಟ್ಟಿಗೆ ಬಂದಿವೆ. ಹತ್ತು ವರ್ಷಗಳ ಹಿಂದೆ ಹೀಗೆ ಎರಡು ಹಬ್ಬಗಳೂ ಒಟ್ಟಿಗೆ ಬಂದಿದ್ದವು ಎಂದು ಹೇಳಿದರು. ಪ್ರಾಂಶುಪಾಲ ಡಾ.ನಾಗರಾಜು ಇದ್ದರು.