ಸೆಕ್ರೆಡ್ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಪ್ರಸಾದ್ ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಅರಿವು ಅಗತ್ಯ

ಶನಿವಾರಸಂತೆ: ಅಪ್ರಾಪ್ತ ಹೆಣ್ಣು ಮಕ್ಕಳ ರಕ್ಷಣೆಗಾಗಿ ರೂಪಿಸಿರುವ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದುವ ಅಗತ್ಯ ಇದೆ ಎಂದು ಜಿಲ್ಲಾ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್ ಹೇಳಿದರು.
ಶನಿವಾರಸಂತೆ ಸೆಕ್ರೆಡ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾತನಾಡಿದರು.
ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಅತ್ಯಾಚಾರ, ದೌರ್ಜನ್ಯ ತಡೆಗಟ್ಟಲು 2012ರಲ್ಲಿ ಅಂದಿನ ಕೇಂದ್ರ ಸರ್ಕಾರ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಿತು. ಅಪ್ರಾಪ್ತ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ ಕಾಯ್ದೆ ರೂಪಿಸಲಾಗಿದೆ ಎಂದರು.
ಅಪ್ರಾಪ್ತ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಕೈ ಸನ್ನೆ ಮಾಡುವುದು, ಮುಟ್ಟಿ ಮಾತನಾಡಿಸುವುದು ಸೇರಿದಂತೆ ದುರ್ನಡತೆ ತೋರುವುದು ಪೋಕ್ಸೋ ಕಾಯ್ದೆ ಪ್ರಕಾರ ಅಪರಾಧ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಅರಿವು ಹೊಂದಬೇಕು ಎಂದು ಸಲಹೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ವಿಠಲ್ ಮಾತನಾಡಿದರು. ವಿದ್ಯಾಸಂಸ್ಥೆ ಪ್ರಾಂಶುಪಾಲ ಸಭಾಸ್ಟಿನ್ ಮೈಕಲ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್, ಪ್ರಮುಖರಾದ ಪ್ರದೀಪ್, ಫಾ.ಫ್ರಾನ್ಸಿಸ್, ಬಿ.ಎಸ್.ಜಯಪ್ಪ ಮುಂತಾದವರು ಹಾಜರಿದ್ದರು.