ಬೆಳಗಾವಿ ನಗರದ ಭರತೇಶ ಎಜುಕೇಶನ್ ಟ್ರಸ್ಟ್‌ನ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪದವಿ ದಿನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿ ಗಳಿಗೆ ದೊಡ್ಡಣ್ಣವರ ಪ್ರಮಾಣಪತ್ರ ನೀಡಿ ಗೌರವಿಸಿದರು. ಅನುಪಮಾ ಶಿರಹಟ್ಟಿ, ಮಹಾವೀರ ಉಪಾಧ್ಯೆ, ಡಾ. ಎ.ಆರ್.ರೊಟ್ಟಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅಗತ್ಯ

ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಬೇಕು ಎಂದರೆ ಕಠಿಣ ಪರಿಶ್ರಮ ವಹಿಸಬೇಕು. ಬದಲಾಗುತ್ತಿರುವ ಮಾರುಕಟ್ಟೆ ಬಗ್ಗೆ ನಿರಂತರ ಅಧ್ಯಯನ ಮಾಡುತ್ತಿರಬೇಕು ಎಂದು ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೀವ ದೊಡ್ಡಣ್ಣವರ ತಿಳಿಸಿದರು.

ನಗರದ ಭರತೇಶ ಎಜುಕೇಷನ್ ಟ್ರಸ್ಟ್‌ನ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಜರುಗಿದ ಎಂ.ಬಿ.ಎ. ವಿದ್ಯಾರ್ಥಿಗಳ 2020-2022 ಬ್ಯಾಚ್‌ನ ಪದವಿ ದಿನ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೋರೇಟ್ ಜಗತ್ತಿನಲ್ಲಿ ನಿರಂತರ ಅಧ್ಯಯನ ಅಗತ್ಯವಾಗಿದೆ. ನಿರ್ವಹಣಾ ತಂಡ ಹಾಗೂ ವೃತ್ತಿಪರ ತಂಡದವರೊಂದಿಗೆ ಕೆಲಸ ಮಾಡಿದಾಗ ಅನುಭವ ಹೆಚ್ಚಾಗುತ್ತದೆ. ಈ ಅನುಭವವೇ ಯಶಸ್ಸಿಗೆ ಸಹಕಾರಿಯಾಗಲಿದೆ ಎಂದರು.

ಜೈನ ಇಂಜಿನಿಯರಿಂಗ್ ಲಿ. ಸಂಸ್ಥೆಯ ಮುಖ್ಯ ಮಾರುಕಟ್ಟೆ ಅಧಿಕಾರಿ ಅನುಪಮಾ ಶಿರಹಟ್ಟಿ ಮಾತನಾಡಿ, ಸ್ನಾತಕೋತ್ತರ ಶಿಕ್ಷಣದ ನಂತರ ನಿಜವಾದ ಶಿಕ್ಷಣ ಪ್ರಾರಂಭವಾಗುತ್ತದೆ. ಮಾರುಕಟ್ಟೆ ನಿಜವಾದ ಶಿಕ್ಷಕನಪಾತ್ರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ ಯಶಸ್ಸು ಸಾಧಿಸಲು ಸವಾಲು ಎದುರಿಸುವ ಸಾಮರ್ಥ್ಯ ಹೊಂದಬೇಕು ಎಂದರು. ಯಶವಂತ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಮಹಾವೀರ ಉಪಾಧ್ಯೆ, ಡಾ. ಎ.ಆರ್.ರೊಟ್ಟಿ , ಡಾ. ಪ್ರಸಾದ ದಡ್ಡಿಕರ ಇತರರಿದ್ದರು.