ಜಿಲ್ಲೆ

ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ

ಲಕ್ಷ್ಮೇಶ್ವರ: ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂ.18 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.

ಈ ವೇಳೆ ಮಾತನಾಡಿದ ತಹಸೀಲ್ದಾರ್, ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಜೂ. 18 ರಂದು ನಡೆಯುವ ಪರೀಕ್ಷೆಗೆ ಸರ್ಕಾರದ ನಿರ್ದೇಶನದಂತೆ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷಾರ್ಥಿಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಉಪನ್ಯಾಸಕರು, ಪಾಲಕರು ಧೈರ್ಯ ತುಂಬುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು. ಕೋವಿಡ್-19 ಸೋಂಕು ಹರಡದಂತೆ ಪುರಸಭೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ವೇಳೆ ಯಾವುದೇ ಲೋಪದೋಷವಾಗದಂತೆ ವ್ಯವಸ್ಥಿತ, ಶಿಸ್ತುಬದ್ಧ ಮತ್ತು ಯಶಸ್ವಿಯಾಗಿ ಪರೀಕ್ಷೆ ನಡೆಸಲು ಎಲ್ಲರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಡಿ.ಪಿ. ಹೇಮಾದ್ರಿ ಮಾಹಿತಿ ನೀಡಿ, ಲಕ್ಷ್ಮೇಶ್ವರದ ಸವಣೂರ ರಸ್ತೆಯಲ್ಲಿರುವ ಬಿಸಿಎನ್ ಪಿಯು ಕಾಲೇಜ್ ಮತ್ತು ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿವೆ. ಈ ಎರಡೂ ಕೇಂದ್ರದಲ್ಲಿ ತಾಲೂಕಿನ 652 ವಿದ್ಯಾರ್ಥಿಗಳು ಮತ್ತು ಅಂತರ್ ಜಿಲ್ಲೆಯ 28 ವಿದ್ಯಾರ್ಥಿಗಳು ಸೇರಿ ಒಟ್ಟು 680 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1 ಮೀಟರ್ ಅಂತರದಲ್ಲಿರುವಂತೆ 1 ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ ಓರ್ವ ಅಂಧ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಬಿಸಿಎನ್ ಪದವಿ ಪೂರ್ವ ಕಾಲೇಜಿನಲ್ಲಿ 17 ಕೊಠಡಿಗಳು ಮತ್ತು ಬಿಸಿಎನ್ ಪಾಲಿಟೆಕ್ನಿಕ್​ನಲ್ಲಿ 13 ಕೊಠಡಿಗಳನ್ನು ಸಿದ್ಧ್ದಡಿಸಿಕೊಳ್ಳಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಪರೀಕ್ಷಾ ಸಾಮಗ್ರಿಗಳ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯ. ನೀರಿನ ಬಾಟಲಿ, ಅವಶ್ಯವಿದ್ದಲ್ಲಿ ಉಪಾಹಾರ ತೆಗೆದುಕೊಂಡು ಬರಬಹುದಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 94489 22996 ಸಂಪರ್ಕಿಸಬಹುದು ಎಂದರು.

ಬಿಸಿಎನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಸವರಾಜ ನೆಲವಿಗಿ, ನಿರ್ದೇಶಕರಾದ ಡಾ.ರೇವತಿ ನೆಲವಿಗಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ನಾಗರಾಜ ಕುಲಕರ್ಣಿ, ಎಎಸ್​ಐ ಶಂಕರ ಬೆಟಗೇರಿ, ಎಸ್.ಎನ್. ಮಳಲಿ, ಡಿ.ಎಸ್. ಪ್ಯಾಟಿ, ಎಸ್.ಎಸ್. ಅಂಗಡಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಜರಿದ್ದರು.

ಪೋಟೊ: 15-ಎಲ್​ಎಕ್ಷ್​ಆರ್-3

ಲಕ್ಷ್ಮೇಶ್ವರದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದ್ವಿತಿಯ ಪಿಯು ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ನೆಲವಿಗಿ, ಬಿಇಒ ವಿ.ವಿ. ಸಾಲಿಮಠ ಉಪಸ್ಥಿತರಿದ್ದರು.