ಬೆಂಗಳೂರು ಗ್ರಾಮಾಂತರ: ಜ್ಞಾನದೇಗುಗಳಿಗೆ ತಳಿರು ತೋರಣಗಳ ಸಿಂಗಾರ, ರಂಗೋಲಿಗಳ ಚಿತ್ತಾರ, ಬಾನೆತ್ತರಕ್ಕೆ ಹಾರಾಡುತ್ತಿದ್ದ ರಾಷ್ಟ್ರಧ್ವಜದ ಗಾಂಭೀರ್ಯ, ಜನಗಣಮನದ ಮಾರ್ಧನಿ, ಸಂಭ್ರಮ, ಸಡಗರ, ಸ್ನೇಹಿತರ ಸಮ್ಮಿಲನ, ನಗು, ಆತಂಕ ಬೆರೆತ ಸಂತಸ...
ಇವೆಲ್ಲ ಜಿಲ್ಲೆಯಾದ್ಯಂತ ಸೋಮವಾರ ಆರಂಭವಾದ ಶಾಲಾ ಅವರಣದಲ್ಲಿ ಕಂಡುಬಂದ ದೃಶ್ಯಗಳು.
ಸರ್ಕಾರದ ನಿರ್ದೇಶನದಂತೆ ಗ್ರಾಮಾಂತರ ಜಿಲ್ಲೆಯ 265 ಶಾಲೆಗಳಲ್ಲಿ 9 ಹಾಗೂ 10ನೇ ತರಗತಿಗಳು ಪುನರಾರಂಭಗೊಂಡಿವೆ. 15 ದಿನಗಳಿಂದ ಸಿದ್ಧತೆ ನಡೆಸಿದ್ದ ಆಯಾ ತಾಲೂಕುಗಳ ಬಿಇಒ ನೇತೃತ್ವದ ಶಿಕ್ಷಕರ ತಂಡ ಸೋಮವಾರ ಮಕ್ಕಳ ಸ್ವಾಗತಕ್ಕೆ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ಜ್ಞಾನದೇಗುಲಗಳನ್ನು ತಳಿರುತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ಕರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿದ್ದ ಜಿಲ್ಲಾಡಳಿತಕ್ಕೆ ಪಾಲಕರಿಂದ ಉತ್ತಮ ಸ್ಪಂದನೆಯೇ ದೊರೆತಿದೆ, ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ನೆಲಮಂಗಲದಲ್ಲಿ ಶೇ.90 ಮಕ್ಕಳ ಹಾಜರಿ ಕಂಡುಬಂದರೆ, ದೊಡ್ಡಬಳ್ಳಾಪುರದಲ್ಲಿ ಶೇ.85 ಮಕ್ಕಳು ಶಾಲೆಯತ್ತ ಮುಖಮಾಡಿದ್ದಾರೆ. ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕಿನಲ್ಲಿ ಶೇ.70 ಮಕ್ಕಳು ಶಾಲೆಗೆ ಹಾಜರಾಗುವ ಮೂಲಕ 18 ತಿಂಗಳಿಂದ ಆನ್‌ಲೈನ್ ತರಗತಿಯೆಂಬ ತಲೆಶೂಲೆಯಿಂದೆ ಬೇಸತ್ತಿದ್ದ ಮಕ್ಕಳು ಅದರಿಂದ ಹೊರಬಂದು ಸ್ವಚ್ಛಂದದ ಹಕ್ಕಿಗಳಂತೆ ಹಾರಾಡಿದ್ದಾರೆ.
ಮೊದಲ ದಿನ ಸ್ನೇಹಿತರ ಸಮ್ಮಿಲನ: ಮೊದಲ ದಿನ ಎಲ್ಲ ಶಾಲೆಗಳಲ್ಲಿ ಔಪಚಾರಿಕ ಚಟುವಟಿಕೆ ನಡೆಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರು ಮುಖಾಮುಖಿಯಾಗಿ ಸಂವಹನ ನಡೆಸಿದರು, ಮೊದಲ ದಿನ ಕರೊನಾ ಪಾಠಕ್ಕೆ ಸೀಮಿತವಾಯಿತು, ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬರೋಬ್ಬರಿ 18 ತಿಂಗಳ ಮುಖಾಮುಖಿಯಾಗದಿದ್ದ ಸ್ನೇಹಿತರು ಒಬ್ಬರನ್ನು ಕಂಡು ಮತ್ತೊಬ್ಬರು ಸಂತಸ ಹಂಚಿಕೊಂಡರು, ಬಹುತೇಕ ಶಾಲೆಯ ವಾತಾವರಣವನ್ನೇ ಮರೆತಂತಿದ್ದ ಮಕ್ಕಳಲ್ಲಿ ಹೊಸ ಉತ್ಸಾಹ ಕಂಡುಬಂತು. ಸ್ನೇಹಿತರ ಸಮ್ಮಿಲನದಿಂದ ಶಾಲೆ ಸಂಭ್ರಮ ಸಡಗರಿಂದ ತುಂಬಿತ್ತು.
ಆಟ, ಊಟ, ಓಟ.. ಎಂಟಿಬಿ ಪಾಠ: ಹೊಸಕೋಟೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಮಕ್ಕಳೊಂದಿಗೆ ಬೆರೆತು ಸಂತಸ ಹಂಚಿಕೊಂಡರು, ಶಾಲೆಯೆಂದರೆ ಆಟ, ಊಟ, ಪಾಠ ಕೊನೆಗೆ ಮನೆಕಡೆಗೆ ಓಟ ಎಂಬಂತಿರಬೇಕು. ಆದರೆ ಕರೊನಾ ಕಾರಣದಿಂದ ಇವೆಲ್ಲವೂ ಮಕ್ಕಳ ಪಾಲಿಗೆ ಮರೀಚಿಕೆಯಾಗಿತ್ತು. ಇನ್ಮುಂದೆ ಇಂಥ ಪರಿಸ್ಥಿತಿ ಎದುರಾಗುವುದು ಬೇಡ ಎಂದು ಆಶಿಸಿದರು.
ಶಾಲಾ ಶಿಕ್ಷಕರಾಗಿ ಕ್ಲಾಸ್ ತೆಗೆದುಕೊಂಡ ಎಂಟಿಬಿ, ಮೊದಲ ದಿನ ಕರೊನಾ ಬಗ್ಗೆ ಪಾಠ ಮಾಡಿದರು. ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಹೇಳಿದರು. ಪ್ರಸ್ತುತ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ, ಮೂರನೇ ಅಲೆ ಬಗ್ಗೆ ಮುನ್ಸೂಚನೆ ಇದೆ. ಆದರೆ ಯಾವುದೇ ಆತಂಕ ಬೇಡ ಕರೊನಾ ನಿಯಮಗಳೊಂದಿಗೆ ಶಾಲೆಗೆ ಹಾಜರಾಗಿ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೆಲವು ವಿದ್ಯಾರ್ಥಿಗಳನ್ನು ಕರೆದು 18 ತಿಂಗಳು ಶಾಲೆಯಿಂದ ಹೊರಗುಳಿದದ್ದರ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಯಿತು, ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.