ಅರಕಲಗೂಡು ತಾಲೂಕಿನ ಹುಲಿಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣೆಗೆ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತು ಗುರುತಿನ ಪತ್ರ ಪ್ರದರ್ಶಿಸಿದ ವಿದ್ಯಾರ್ಥಿಗಳು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಚುನಾವಣಾ ಅರಿವು

ಅರಕಲಗೂಡು: ತಾಲೂಕಿನ ಹುಲಿಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2023- 24ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಹಮ್ಮಿಕೊಳ್ಳುವ ಮೂಲಕ ಸೋಮವಾರ ಮಕ್ಕಳಿಗೆ ಮತ ಚಲಾವಣೆಯ ಕುರಿತು ಮಾರ್ಗದರ್ಶನ ನೀಡಲಾಯಿತು.

ಚುನಾವಣೆಯಲ್ಲಿ 21 ಅಭ್ಯರ್ಥಿಗಳು ಭಾಗವಹಿಸಿದ್ದರು. ವಿಧಾನಸಭೆ ಮತ್ತು ಲೋಕಸಭೆ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆಯನ್ನು ರೂಪಿಸಲಾಗಿತ್ತು. ಮತ ಚಲಾಯಿಸಲು ಮತಯಂತ್ರ ಮತ್ತು ಕಂಟ್ರೋಲ್ ಯೂನಿಟ್‌ಗಳನ್ನು ಶಿಕ್ಷಕ ಈರಣ್ಣ ಗೂಳಿ ವಿನ್ಯಾಸಗೊಳಿಸಿದ್ದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ಯಾವ ರೀತಿಯಲ್ಲಿ ಇ.ವಿ.ಎಂ. ಬಳಸಿ ಮತ ಚಲಾವಣೆ ಮಾಡಲಾಗುತ್ತದೆ, ಈ ಹಿಂದೆ ಇದ್ದಂತಹ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ಯಾವ ರೀತಿ ಮತ ಚಲಾವಣೆ ಮಾಡುತ್ತಿದ್ದರು ಎಂಬುದನ್ನು ಪರಿಚಯಿಸಲಾಯಿತು.

ವಿದ್ಯಾರ್ಥಿಗಳು ಅಭ್ಯರ್ಥಿಯ ಏಜೆಂಟರಾಗಿ ಭಾಗವಹಿಸಿದ್ದರು ಹಾಗೂ ಶಾಲಾ ಗುರುತಿನಪತ್ರ, ಆಧಾರ್ ಕಾರ್ಡ್‌ಗಳನ್ನು ಮತ ಚಲಾಯಿಸಲು ಗುರುತಿಗಾಗಿ ಬಳಸಿಕೊಳ್ಳಲಾಯಿತು. ವಿದ್ಯಾರ್ಥಿಗಳೆಲ್ಲರೂ ಸರತಿ ಸಾಲಿನಲ್ಲಿ ನಿಂತು ಕ್ರಮವಾಗಿ ಮತ ಚಲಾಯಿಸಿದರು. ಹತ್ತು ದಿನ ಮುಂಚಿತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಂದ ನಾಮಪತ್ರ ಪಡೆಯಲಾಗಿತ್ತು ಮತ್ತು ಅವರು ಮತಯಾಚನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಹಿರಿಯ ಶಿಕ್ಷಕ ಯೋಗೀಶ್ವರ್ ಮುಖ್ಯಚುನಾವಣಾ ಅಧಿಕಾರಿಯಾಗಿ, ಈರಣ್ಣ ಗೂಳಿ ಸಹಾಯಕ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಯಾಗಿ ರೂಪಾ, ಮಹದೇವಸ್ವಾಮಿ, ಸುಮಂತ್, ಗಂಗಮ್ಮ, ರಂಗಯ್ಯ, ಕರ್ತವ್ಯ ನಿರ್ವಹಿಸಿದರು.