ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಅಂಕಗಳಿಸುವ ಮೂಲಕ ಗುರಿ ತಲುಪಬೇಕು ಎಂದು ದೇವರಾಜ ಅರಸು ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಲಿಂಗರಾಜು ತಿಳಿಸಿದರು.
ನಗರದ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸಾಮರಸ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ಮಂದಿ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನ ಪಡೆದಿದ್ದಾರೆ, ಅದೇ ರೀತಿ ತಾವು ಸಹ ಇಲಾಖೆಯಿಂದ ನೀಡಿರುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಸ್ಥಾನ ಗಳಿಸಬೇಕೆಂದು, ಅಲ್ಲದೆ ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳಿಸಿದವರಿಗೆ ಪ್ರೋತ್ಸಾಹ ಧನ ಸಹ ನೀಡಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಆಸರೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಟಿ.ಜೆ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ವಿದ್ಯೆಯೇ ಸಂಪತ್ತು ಎಂಬುದನ್ನು ಅರಿತು ಮುನ್ನಡೆಯಬೇಕು. ವಿದ್ಯಾರ್ಥಿ ಕಾಲಘಟ್ಟವು ಚಿನ್ನದಂತಹ ಜೀವನ ವಾಗಿದ್ದು, ಈ ಅವಧಿಯಲ್ಲಿ ವಿದ್ಯಾರ್ಜ ನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಶಂಕರ್ ಮಾತನಾಡಿ, ಶಿಕ್ಷಣದಲ್ಲಿ ಪೈಪೋಟಿ ಉಂಟಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ಶ್ರಮವಹಿಸಿ ಉನ್ನತ ಅಂಕ ಗಳಿಸುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿನಿಲಯಕ್ಕೆ ಕೀರ್ತಿ ತರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಗುರುರಾಜು ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ನಿಲಯ ಪಾಲಕ ಚಿನ್ನಸ್ವಾಮಿ, ಲಿಂಗಣ್ಣ ಎಂ, ಅಶ್ವತ್ ನಾರಾಯಣ, ಸುನೀತಾ,ರೇಖಾ ಇತರರು ಉಪಸ್ಥಿತರಿದ್ದರು.