ಹುಲಸೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಿಂತ ಮೊಬೈಲ್ ಬಳಕೆ ಮಾಡುವುದರಿಂದ ವಿವಿಧ ಚಟಗಳಿಗೆ ಬಲಿಯಾಗಿ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಹಾಗಾಗದಂತೆ ಶಿಕ್ಷಕರು ಹಾಗೂ ಪಾಲಕರು ಎಚ್ಚರ ವಹಿಸುವುದು ಅವಶ್ಯಕ ಎಂದು ಸಿಪಿಐ ಅಲಿಸಾಬ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಜತೆಗೆ ಕಾನೂನು ಅರಿವು ಹೊಂದುವುದು ಅಗತ್ಯವಾಗಿದೆ ಎಂದರು.
೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧ. ಇಂತಹ ವಿದ್ಯಾರ್ಥಿ ಹಾಗೂ ಪಾಲಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ತಿಳಿಸಿದರು.
ಸತತ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ತಕ್ಕಂತೆ ಉತ್ತಮ ಗುರಿ ಹೊಂದಬೇಕು. ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಒಳ್ಳೆ ಸಂಸ್ಕಾರ ಪಡೆದು ಸಮಾಜದಲ್ಲಿ ಅಷ್ಟೇ ಅಲ್ಲ, ಜಿ¯್ಲೆ ಹಾಗೂ ರಾಜ್ಯದಲ್ಲಿ ಹೆಸರು ಪಡೆಯಬೇಕು ಎಂದರು.
ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ಕಾನೂನು ಅರಿವು ಎಲ್ಲರಲ್ಲಿಯೂ ಇರಬೇಕು. ತಪ್ಪು ಮಾಡಿದರೆ ಕಾನೂನು ಶಿಕ್ಷೆ ನೀಡುತ್ತದೆ. ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡದೆ ಓದಿಗೆ ಮಹತ್ವ ನೀಡಿ ಹೆಚ್ಚು ಅಂಕ ಪಡೆಯುವುದರಲ್ಲಿ ಸಫಲರಾಗಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಕುಮಾರ ನಿಡೋದೆ ಪಾಸ್ತಾವಿಕ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾರಶೆಟ್ಟೆ, ಉಪಾಧ್ಯಕ್ಷ ಚಂದ್ರಕಾಂತ ದೇಟ್ನೆ, ಕಾರ್ಯದರ್ಶಿ ಬಂಡುರಾವ ಪಾಟೀಲ್, ಗ್ರಾಪಂ ಸದಸ್ಯ ಜಗನಾಥ ದೇಟ್ನೆ, ಸಂಸ್ಥೆ ನಿರ್ದೇಶಕರಾದ ಕಾಶಿನಾಥ ಕೌಟೆ, ವೀರಪ್ಪ ಪಂಚಾಳ, ಸೂರ್ಯಕಾಂತ ಪಾರರಶೆಟ್ಟೆ, ಮುಖ್ಯಗುರು ಭಗವಾನರಾವ ಕುಲಕರ್ಣಿ, ಉದಯರಾಜ ಪಾರಶೆಟ್ಟೆ ಇದ್ದರು. ಪರಶುರಾಮ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು. ನಂತರ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ಓದಲಾಯಿತು.