ಹನಗೋಡು: ಹನಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 130 ಮಕ್ಕಳಿಗೆ ಬೆಂಗಳೂರಿನ ಶ್ರೀಗಂಧ ಫೌಂಡೇಷನ್ ವತಿಯಿಂದ ಉಚಿತವಾಗಿ ನೋಟ್ ಬುಕ್ ಸೇರಿದಂತೆ ಕಲಿಕೋಪಕರಣಗಳನ್ನು ಫೌಂಡೇಷನ್ ನಿರ್ದೇಶಕ ಪ್ರಶಾಂತ್ ವಿತರಿಸಿದರು.
ಪ್ರಶಾಂತ್ ಮಾತನಾಡಿ, 2007ರಲ್ಲಿ ನಾಲ್ಕು ಮಂದಿಯಿಂದ ಆರಂಭಗೊಂಡ ಶ್ರೀಗಂಧ ಫೌಂಡೇಷನ್ ಇಂದು ಮುಖ್ಯಸ್ಥ ಪ್ರಶಾಂತ್ ಪತಂಗೆ ನೇತೃತ್ವದಲ್ಲಿ ಸಾವಿರ ಮಂದಿ ಸದಸ್ಯರಿದ್ದು, ಇದೀಗ ದಾನಿಗಳ ನೆರವು ಹಾಗೂ ವೈಯಕ್ತಿಕವಾಗಿ ರಾಜ್ಯಾದ್ಯಂತ 110 ಸರ್ಕಾರಿ ಶಾಲೆಗಳಿಗೆ ಕಲಿಕೋಪಕರಣಗಳನ್ನು ವಿತರಿಸಲಾಗಿದೆ ಎಂದರು.
ಹನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆೆ ಮುಂದಿನ ಬಾರಿಯೂ ಕಲಿಕೋಪಕರಣ ಸೌಲಭ್ಯ ಕಲ್ಪಿಸಲಾಗುವುದೆಂದು ಹೇಳಿದರಲ್ಲದೆ, ಇಲ್ಲಿ ಸೌಲಭ್ಯ ಪಡೆದ ಮಕ್ಕಳು ಮುಂದೆ ನೀವು ಓದಿದ ಶಾಲೆಗೆ ನೆರವಾಗುವಂತೆ ಸಲಹೆ ನೀಡಿದರು.
ಶಾಲೆಯ ಹಳೇ ವಿದ್ಯಾರ್ಥಿ ಹನಗೋಡು ನಟರಾಜ್ ಮಾತನಾಡಿ, ಈ ಶಾಲೆಗೆ ಈಗಾಗಲೆ ಹುಣಸೂರು ಫ್ಲೈವುಡ್ ಕಾರ್ಖಾನೆ ವತಿಯಿಂದ ಕಂಪ್ಯೂಟರ್ ಸೇರಿದಂತೆ ಅಗತ್ಯ ಪೀಠೋಪಕರಣ ಕಲ್ಪಿಸಲಾಗಿದೆ. ಮುಂದೆ ಶಾಲೆಗೆ ಸಂಘ-ಸಂಸ್ಥೆ, ದಾನಿಗಳ ಮೂಲಕ ಮೂಲ ಸೌಕರ್ಯ ಕಲ್ಪಿಸಲಾಗುವುದೆಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಇಂದಿರಮ್ಮ, ಶಿಕ್ಷಕ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಆರ್.ರಮೇಶ್, ಶ್ರೀಗಂಧ ಫೌಂಡೇಷನ್‌ನ ಶಿಕ್ಷಣದ ಬಗೆಗಿನ ಕಾಳಜಿ ಹಾಗೂ ಉಚಿತ ಕಲಿಕೋಪಕರಣ ವಿತರಣೆಯನ್ನು ಶ್ಲಾಘಿಸಿ, ಇಲ್ಲಿ ಹೆಚ್ಚು ಬಡವರು, ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮುಂದೆಯೂ ನೆರವಾಗುವಂತೆ ಮನವಿ ಮಾಡಿದರು.
ಜನಜಾಗೃತಿ ಸಮಿತಿ ಸದಸ್ಯರಾದ ನೇರಳಕುಪ್ಪೆ ಮಹದೇವ್, ದಾ.ರಾ.ಮಹೇಶ್, ಶ್ರೀಧರ್, ಶಿಕ್ಷಕರಾದ ಶಿವಮ್ಮ, ಗಿರಿಜಾವತಿ, ಸ್ಪೂರ್ತಿ, ದಿವ್ಯಾ, ಅಶ್ವಿನಿ, ಮಮತಾ ಹಾಗೂ ವಿದ್ಯಾರ್ಥಿಗಳಿದ್ದರು.