ಬೆಳಗಾವಿ: ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತವೂ ಸಹ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೆಯಾದ ವಿಶೇಷ ಸ್ಥಾನಮಾನ ಹೊಂದಿದೆ. ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಗ್ರಹದ ಕುರಿತು ಅಧ್ಯಯನ ಮಾಡುವುದು ಮತ್ತು ಅದರ ಜ್ಞಾನ ಹೊಂದುವುದು ಅತಿ ಅವಶ್ಯ ಎಂದು ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕ ದೀಪಕ ಧಡೂತಿ ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಆಚರಣೆ ಅಂಗವಾಗಿ ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯಕ್ಕೆ 25 ಲಕ್ಷ ರೂ. ಮೌಲ್ಯದ ಚಿಕ್ಕ ಉಪಗ್ರಹವನ್ನು (ನ್ಯಾನೋ ಸ್ಯಾಟ್‌ಲೈಟ್) ಕೊಡುಗೆಯಾಗಿ ನೀಡಿ, ಉಪಗ್ರಹ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಸ್ಯಾಟ್‌ಲೈಟ್ ಪ್ರಯೋಗಾಲಯ ಹೊಂದಿದ ರಾಜ್ಯದ ಪ್ರಥಮ ಪಾಲಿಟೆಕ್ನಿಕ್ ಮಹಾವಿದ್ಯಾಲಯವಾಗಿದ್ದು, ಪಾಲಿಟೆಕ್ನಿಕ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಮತ್ತು ಮೆಕಾಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಉಪಗ್ರಹದ ತಯಾರಿಕೆ, ನಿಯಂತ್ರಣ ಮುಂತಾದ ವಿಷಯಗಳ ಕುರಿತು ಅಧ್ಯಯನ ಮಾಡಲು ಉಪಯುಕ್ತವಾಗಿದೆ. ಅದಲ್ಲದೆ ಉಪಗ್ರಹ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಚಿಕ್ಕ ಉಪಗ್ರಹದ ಮೂಲಕ ಉಪಗ್ರಹ ತಯಾರಿಕೆ, ನಿಯಂತ್ರಣ ಸೇರಿ ಇನ್ನಿತರ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಲು ಅನಕೂಲವಾಗುತ್ತದೆ. ಅಲ್ಲದೆ ತರಬೇತಿಗಾಗಿ ಬೇಕಾದ ನುರಿತ ಅನುಭವಿ ತಂತ್ರಜ್ಞಾನಿ ಮತ್ತು ಪರಿಣತರನ್ನು ತಮ್ಮ ಸಂಸ್ಥೆಯಿಂದ ನೀಡುವುದಾಗಿ ಅವರು ತಿಳಿಸಿದರು. ಉದ್ಘಾಟನೆ ಬಳಿಕ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕ ಮಾಲಿಕೆಯ ಮೊದಲನೆ ಉಪನ್ಯಾಸವನ್ನು ಉದ್ಯಮಶೀಲತೆ ಮತ್ತು ಪ್ರಾರಂಭ ವಿಷಯ ಕುರಿತು ಉಪನ್ಯಾಸ ನೀಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣವರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಉಪಗ್ರಹವನ್ನು ದಾನವಾಗಿ ನೀಡಿ ಪ್ರಯೋಗಾಲಯ ಸ್ಥಾಪಿಸಲು ಕಾರಣೀಭೂತರಾದ ದೀಪಕ ಧಡೂತಿ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ, ಪಾಲಿಟೆಕ್ನಿಕ್ ತಾಂತ್ರಿಕ ಸಲಹಾ ಮಂಡಳಿ ಚೇರ್ಮನ್ ಅಶೋಕ ದಾನವಾಡೆ, ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ತಾಂತ್ರಿಕ ಸಲಹಾ ಮಂಡಳಿ ಸದಸ್ಯ ಮತ್ತು ಪ್ರಾಚಾರ್ಯ ಬಿ.ಎಂ.ಬಿ.ಪಾಟೀಲ, ಟೆಕ್ನಿಕಲ್ ಡೈರೆಕ್ಟರ್ ಎಸ್.ಎನ್. ತುಳಸಿಗೇರಿ,ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಸೋಮಶೇಖರ ಅಂಬವ್ವಗೋಳ ಮತ್ತು ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಇತರರಿದ್ದರು.