ತರೀಕೆರೆ: ಪತ್ರ ಬರೆಯುವ ಸಂಸ್ಕೃತಿ ಉಳಿಸುವ ಜತೆ ಅಂಚೆ ಕಚೇರಿ ವ್ಯವಹಾರ ತಿಳಿದುಕೊಳ್ಳುವ ಸಲುವಾಗಿ ಮಂಗಳವಾರ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ಮಕ್ಕಳು ಪಟ್ಟಣದ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದ್ದರು.
ಶಿಕ್ಷಕರೊಂದಿಗೆ ಅಂಚೆ ಕಚೇರಿಗೆ ತೆರಳಿದ 6 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಲ್ಲಿನ ಅಧಿಕಾರಿಗಳಿಂದ ತೆರೆದ ಅಂಚೆ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್‌ಗಳಂಥ ಪತ್ರ ವ್ಯವಹಾರಗಳ ಜತೆ ನಿಶ್ಚಿತ ಠೇವಣಿ (ಟಿಡಿ), ಆವರ್ತಿಕ ಠೇವಣಿ (ಆರ್‌ಡಿ), ರೂರಲ್ ಲೈಫ್ ಇನ್ಯೂರೆನ್ಸ್ (ಆರ್‌ಪಿಎಲ್‌ಐ), ಪೋಸ್ಟ್ ಲೈಫ್ ಇನ್ಯೂರೆನ್ಸ್ (ಪಿಎಲ್‌ಐ), ಉಳಿತಾಯ ಖಾತೆ, ಮನಿ ಆರ್ಡರ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಕುರಿತಾದ ಸಮಗ್ರ ಮಾಹಿತಿ ಪಡೆದುಕೊಂಡರು.
ದೀಪಾವಳಿ ಹಬ್ಬದ ಶುಭಾಶಯ ಕೋರುವ ಉದ್ದೇಶಕ್ಕೆ ಸ್ವತಃ ವಿವಿಧ ವಿನ್ಯಾಸದಲ್ಲಿ ತಯಾರಿಸಿದ್ದ ಆಕರ್ಷಕ ಗ್ರೀಟಿಂಗ್ ಕಾರ್ಡ್‌ಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ ಚಂದ ಗೆಹ್ಲೋತ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ, ವಿದ್ಯಾರ್ಥಿಗಳ ಸಂಬಂಧಿಕರಿಗೆ ತೆರೆದ ಅಂಚೆ ಮೂಲಕ ರವಾನಿಸಿದರು. ಪ್ರಭಾರ ಪೋಸ್ಟ್ ಮಾಸ್ಟರ್ ಅನಿತಾ, ಪ್ರಾಚಾರ್ಯ ಕಾರ್ತಿಕೇಯನ್, ಸಹ ಶಿಕ್ಷಕರಾದ ತೇಜಸ್ವಿಕುಮಾರ್, ಅನಿತಾ, ಸುಪ್ರಿಯಾ, ಗೌಸ್ ಅಹ್ಮದ್, ಟಿ.ಗಿರೀಶ್ ಮತ್ತಿತರರಿದ್ದರು.