ಆಲಮೇಲ ಪಟ್ಟಣದ ಎಚ್.ಎ. ನಂದಿ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ವಿಷಯ ಮಿಸ್ ಮ್ಯಾಚ್ ಶುಲ್ಕ ಪಡೆಯದಂತೆ ತಡೆಯುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಸೀಲ್ದಾರ್ ಸುರೇಶ ಚಾವಲರ ಅವರಿಗೆ ಮನವಿ ಸಲ್ಲಿಸಿದರು. ಚಂದ್ರಶೇಖರ ಕೆಳಗಿನಮನಿ, ಲಕ್ಕಪ್ಪ ಹರಿಜನ, ಬಸವರಾಜ ಹೊಸಮನಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದಿರಲು ಒತ್ತಾಯ

ಆಲಮೇಲ: ಪಟ್ಟಣದ ಎಚ್.ಎ. ನಂದಿ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ವಿಷಯ ಮಿಸ್ ಮ್ಯಾಚ್ ಶುಲ್ಕ ಪಡೆಯುತ್ತಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ ಬಣ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ತಹಸೀಲ್ದಾರ್ ಸುರೇಶ ಚಾವಲರ ಅವರಿಗೆ ಮನವಿ ಸಲ್ಲಿಸಿದರು.

ಡಿಎಸ್‌ಎಸ್ ತಾಲೂಕಾಧ್ಯಕ್ಷ ಚಂದ್ರಶೇಖರ ಕೆಳಗಿನಮನಿ ಮಾತನಾಡಿ, ಪರೀಕ್ಷೆ ಸಂದರ್ಭದಲ್ಲಿ ವಿಷಯ ಮಿಸ್ ಮ್ಯಾಚ್ ಸಮಸ್ಯೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಿಂದ ಆಗಿದೆ. ವಿಶ್ವ ವಿದ್ಯಾಲಯದವರು ಅದಕ್ಕೆ ದಂಡ ಕಟ್ಟಲು ಆದೇಶಿಸಿದ್ದಾರೆ. ಸಂಸ್ಥೆಯವರು ಮಾಡಿದ ತಪ್ಪು ಮುಚ್ಚಿ ಹಾಕಲು ವಿದ್ಯಾರ್ಥಿಗಳಿಂದ ದಂಡ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ. ಸಂಸ್ಥೆಯವರೇ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತೊಂದರೆ ನೀಡಿ ಹಣ ವಸೂಲಿ ಮಾಡಬಾರದು. ಇಲ್ಲವಾದರೆ ಆ. 7ರಂದು ಕಾಲೇಜು ಎದುರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಸುರೇಶ ಚಾವಲರ ಮಾತನಾಡಿ, ಕೂಡಲೇ ಸಂಸ್ಥೆಯ ಮುಖ್ಯಸ್ಥರನ್ನು ಕರೆಸಿ ಈ ವಿಷಯದ ಕುರಿತು ವಿಚಾರಿಸುತ್ತೇನೆ ಎಂದರು.

ಸಂಘಟನೆಯ ಲಕ್ಕಪ್ಪ ಹರಿಜನ, ಬಸವರಾಜ ಹೊಸಮನಿ, ಮಲ್ಲಪ್ಪ ಬಿಳಂಬಗಿ, ಸಿದ್ದು ಜಮಾದಾರ, ಪರಶುರಾಮ ಮೇಲಿನಮನಿ, ವಿನೋದ ಸೊಡ್ಡಗಿ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.