ಮೈಸೂರು: ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸುತ್ತದೆ. ಶಿಸ್ತಿನ ಜೀವನದಿಂದ ಯಶಸ್ಸು ಸಾಧ್ಯ ಎಂದು ಏರ್ ಕಮೋಡರ್ ಭೂಪೇಂದ್ರ ಸಿಂಗ್ ಕನ್ವರ್ ಅಭಿಪ್ರಾಯಪಟ್ಟರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜೆಎಸ್‌ಎಸ್ ರೇಡಿಯೋ 91.2 ಎಫ್‌ಎಂನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದ ಜತೆಗೆ ಮೌಲ್ಯಯುತವಾದ ಜೀವನ ರೂಪಿಸಿಕೊಳ್ಳಬೇಕು. ಭಾರತೀಯ ತತ್ವಶಾಸ್ತ್ರದ ವಿಚಾರಗಳು ಇಂದಿಗೂ ಪ್ರಸ್ತುತ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿವೆ. ಧರ್ಮ-ಅರ್ಥ-ಕಾಮ-ಮೋಕ್ಷ ಇವುಗಳು ಪರಸ್ಪರ ಹೊಂದಿಕೊಂಡಿವೆ. ಧರ್ಮದಿಂದ ಅರ್ಥವನ್ನು, ಅರ್ಥದಿಂದ ಕಾಮವನ್ನು, ಕಾಮದಿಂದ ಮೋಕ್ಷವನ್ನು ಪಡೆಯುವಂತೆ ನಮ್ಮ ಆಲೋಚನೆ, ದುಡಿಮೆ ಮತ್ತು ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಏರ್ ಕಮೋಡರ್ ಭೂಪೇಂದ್ರ ಸಿಂಗ್ ಕನ್ವರ್ ಅವರನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಬಿ.ವಿ.ಸಾಂಬಶಿವಯ್ಯ ಸನ್ಮಾನಿಸಿದರು. ವೇದಿಕೆಯಲ್ಲಿ ಎನ್‌ಸಿಸಿ ಮೈಸೂರು ಗ್ರೂಪ್ ಕಮಾಂಡರ್ ಆರ್.ಆರ್. ಮೆನನ್, 14 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನೀಶ್ ಪ್ರಸಾದ್, ಪ್ರಾಂಶುಪಾಲ ಪ್ರೊ. ಎಂ. ಪಿ. ವಿಜಯೇಂದ್ರ ಕುಮಾರ್ ಹಾಗೂ ಇತರರು ಇದ್ದರು.