ಎಂಜಿಎಂ ಕಾಲೇಜು ಆವರಣದಲ್ಲಿ ಗಣ್ಯರು ಸಸಿ ನೆಟ್ಟು ನೀರೆರೆದರು. ಕೆ.ಪಿ.ಚಂದ್ರಕಲಾ, ಡಾ.ಮಂತರ್ ಗೌಡ, ಟಿ.ಆರ್.ಶರವಣಕುಮಾರ್, ಶ್ರೀ ಸದಾಶಿವ ಸ್ವಾಮೀಜಿ ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕೆಲಸವಾಗಲಿ

ಕುಶಾಲನಗರ: ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಮೂಲಕ ಅವರಲ್ಲಿ ಪರಿಸರ ಕಾಳಜಿಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಸಲಹೆ ನೀಡಿದರು.

ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದಿಂದ ಶನಿವಾರ ಎಂಜಿಎಂ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ವನಸಿರಿ ಯೋಜನೆಯಡಿ 500ಕ್ಕೂ ಹೆಚ್ಚು ಗಿಡ ನೆಟ್ಟು ನಿರ್ವಹಿಸಿ, ಬೆಳೆಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಪ್ರೇಮ ಹೆಚ್ಚಿಸುವ ಇಂಥ ಸಾಮಾಜಿಕ ಕಾರ್ಯಕ್ರಮ ಆಲೋಚನೆಯೇ ಅದ್ಭುತ. ಇಂತಹ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಪ್ರತಿ ಶಾಲೆಯಲ್ಲೂ ಆಯೋಜಿಸಬೇಕು. ಗಿಡ ನೆಡುವುದು ಎಷ್ಟು ಮುಖ್ಯವೋ ಅದನ್ನು ಉಳಿಸುವುದು ಕೂಡ ಅಷ್ಟೇ ಮುಖ್ಯ ಎಂದರು.

ಹಿರಿಯ ಪತ್ರಕರ್ತ ಚಿ.ಚಿದ್ವಿಲಾಸ್ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಇದಾಗಿದೆ. ಅದರಲ್ಲೂ ಯುವ ಜನಾಂಗಕ್ಕೆ ಗಿಡ ಉಳಿಸುವ ಜವಾಬ್ದಾರಿ ನೀಡಲಾಗಿದೆ ಎನ್ನುವುದು ಸಂತೋಷದ ವಿಚಾರ ಎಂದರು.

ಪ್ಲಾಸ್ಟಿಕ್ ಬಳಸುವುದನ್ನು ಜನಸಾಮಾನ್ಯರು ನಿಲ್ಲಿಸಬೇಕು. ಸ್ಥಳೀಯ ಆಡಳಿತ ಪ್ಲಾಸ್ಟಿಕ್‌ನಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಸಂಕಲ್ಪ ಮಾಡಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎಂದರು.

ಪರಿಸರದ ಮೇಲೆ ಮಾನವರು ಮಾಡುತ್ತಿರುವ ಅನಾಚಾರಗಳನ್ನು ತಡೆಗಟ್ಟಲು ಸಂಸ್ಥೆ ವತಿಯಿಂದ ಪರಿಸರ ಕಾಳಜಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು.

ಸಂಸ್ಥೆಯ ಲಾಭಾಂಶದಲ್ಲಿ ಮೀಸಲಿಡಲಾಗಿದ್ದ ಸ್ವಲ್ಪ ಹಣವನ್ನು ಗಿಡ ನೆಟ್ಟು ಬೆಳೆಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಗುಂಡೂ ರಾವ್ ಬಡಾವಣೆಯಿಂದ ಹೊಸ ಹೌಸಿಂಗ್ ಬೋರ್ಡ್ ಕಾಲನಿವರೆಗೆ ಜಾಗ ದೊರೆತ ಕಡೆಯೆಲ್ಲ ಗಿಡ ನೆಟ್ಟು ಕನಿಷ್ಠ 3 ವರ್ಷ ಪೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ವನಸಿರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ, ಶುಚಿತ್ವ ಕಾಪಾಡುವ ಬಗ್ಗೆ ಪ್ರತಿಯೊಬ್ಬರಿಗೂ ಕನಿಷ್ಠ ಅರಿವು ಅಗತ್ಯ. ಈ ಹಿಂದೆ ನಡೆದ ಕೆಲವೊಂದು ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಂದ ಪರಿಸರ ಹಾಳಾಗಿದೆ. ಕಾಲಕಾಲಕ್ಕೆ ಪರಿಸರ ಕ್ಷೀಣಿಸಿ ಪ್ರಸ್ತುತ ಪರಿಸರವನ್ನು ಕಡ್ಡಾಯವಾಗಿ ಉಳಿಸಿ ಬೆಳಸುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಡಿಎಫ್‌ಒ ಎ.ಟಿ.ಪೂವಯ್ಯ ಮಾತನಾಡಿ, ಪರಿಸರ ಉಳಿಸಿ ಬೆಳೆಸವ ನಿಟ್ಟಿನಲ್ಲಿ ರಾಜ್ಯಾದ್ಯಂತ 5 ಕೋಟಿ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಅರಣ್ಯ ಪ್ರದೇಶ ವಿಸ್ತರಣೆಗೆ ಕ್ರಮವಹಿಸಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ಪುರಸಭೆ ಸದಸ್ಯ ಸುಂದರೇಶ್, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶಿವರಾಂ, ಕಾಲೇಜು ಅಧ್ಯಕ್ಷ ಶಂಭುಲಿಂಗಪ್ಪ, ಹಿರಿಯ ಸಹಕಾರಿ ಕುಮಾರಪ್ಪ, ಸಂಘದ ನಿರ್ದೇಶಕರಾದ ಕೆ.ಎಸ್.ಮಹೇಶ್, ಜೋಸೆಫ್ ವಿಕ್ಟರ್ ಸೊನ್ಸ್, ನವೀನ್, ವಿ.ಸಿ.ಅಮೃತ್ ಮತ್ತಿತರರು ಇದ್ದರು.