ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಂಗಳವಾರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಕಾಶೀನಾಥ ಜೀರ್ಗೆ, ಮುಖಂಡ ರಾಮಶೆಟ್ಟಿ ಪನ್ನಾಳೆ, ಹಿರಿಯರಾದ ಜಗನ್ನಾಥ ಪಸರಗೆ, ಅಶೋಕ ಪಾಟೀಲ್, ಮಾರುತಿ ಕೋಳಿ, ಬಾಲಾಜಿ ವಾಘಮಾರೆ, ಸಂಜೀವಕುಮಾರ ಕದಮ್ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಅಗತ್ಯ

ಕಮಲನಗರ: ಸಾಧನೆ ಮಾಡಬೇಕು ಎನ್ನುವವರು ನಾಳೆ ಮಾಡುವ ಕೆಲಸ ಇಂದೇ ಮಾಡುತ್ತೇನೆ ಎನ್ನುವ ವೇಗ ರೂಢಿಸಿಕೊಳ್ಳಬೇಕು. ಆಗ ಮಾತ್ರ ಗುರಿ ತಲುಪಲು ಸಾಧ್ಯ. ಪ್ರತಿ ಸಂದರ್ಭ ಧನಾತ್ಮಕ ಚಿಂತನೆ, ಸಮಯ ಪ್ರಜ್ಞೆ ಹೊಂದಿರಬೇಕು. ಆಗ ಅಂದುಕೊಂಡ ಗುರಿ ಸಮೀಪಕ್ಕೆ ಹೋಗಬಹುದು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್ ಹೇಳಿದರು.

ಠಾಣಾಕುಶನೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳ ಆತ್ಮಸ್ಥೈರ್ಯ, ಆತ್ಮಬಲ ಕಳೆದುಕೊಂಡು ಸಮಾಜಕ್ಕೆ ಬೆಳಕಾಗಬೇಕಾದ ಇಂದನ ಮಕ್ಕಳು ಆತ್ಮಸ್ಥೈರ್ಯ ಕಳೆದುಕೊಂಡು ಇರುವಿಕೆಯನ್ನು ಮರೆತು ಹೋಗುತ್ತಿದ್ದಾರೆ. ಸಮೃದ್ಧ ಸಮಾಜ ನಿರ್ಮಾಣವಾಗಬೇಕಾದರೆ ಆತ್ಮಬಲ ಹೆಚ್ಚಿಸಿಕೊಳ್ಳಬೇಕು ಎಂದರು.

ಮುಖಂಡ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಭಯಗೊಳ್ಳದೆ ನಿರಂತರ ಶ್ರಮವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಬಸವಕುಮಾರ ಪಾಟೀಲರು ಮಕ್ಕಳ ಏಳ್ಗೆಗಾಗಿ ಹತ್ತು ಹಲವು ಯೋಜನೆಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ಬದುಕಿಗೆ ಪ್ರೇರಣೆಯಾಗಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಕಾಶೀನಾಥ ಜೀರ್ಗೆ, ಹಿರಿಯರಾದ ಜಗನ್ನಾಥ ಪಸರಗೆ, ಅಶೋಕ ಪಾಟೀಲ್, ಮಾರುತಿ ಕೋಳಿ, ಬಾಲಾಜಿ ವಾಘಮಾರೆ, ಸಂಜೀವಕುಮಾರ ಕದಮ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಸೋಮಲಿಂಗ ವಡ್ಡೆ ಸ್ವಾಗತಿಸಿದರು. ಡಾ. ಸಂಜೀವಕುಮಾರ ಜುಮ್ಮಾ ನಿರೂಪಣೆ ಮಾಡಿದರು.

ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವು ಅದನ್ನು ಹುಡುಕಬೇಕು. ಪ್ರತಿಭೆಗೆ ಬಡವ, ಸಿರಿವಂತರೆಂಬ ಭೇದವಿಲ್ಲ. ವಿದ್ಯೆ, ಯಶಸ್ಸು ಶ್ರಮಿಕನ ಸ್ವತ್ತು ವಿನಾ ಸೋಮಾರಿಯದ್ದಲ್ಲ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಶ್ರದ್ಧೆ, ಸಮಯ ಪಾಲನೆ, ಕಠಿಣ ಪರಿಶ್ರಮ ಇಟ್ಟುಕೊಳ್ಳಬೇಕು.

| ಬಸವಕುಮಾರ ಪಾಟೀಲ್, ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ