ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಕಾನೂನು ಜ್ಞಾನ ಅಗತ್ಯ

ಕಂಪ್ಲಿ: ವಿದ್ಯಾರ್ಥಿ ದೆಸೆಯಲ್ಲೇ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಜಾಗ್ರತೆ ವಹಿಸಬೇಕು ಎಂದು ಕುರುಗೋಡು ಠಾಣೆ ಪಿಎಸ್‌ಐ ಸುಪ್ರೀತ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಮಾಹಿತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಅರಿವು ಪಡೆದುಕೊಳ್ಳಬೇಕು. ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಭವಿಷ್ಯ ಮಂಕಾಗುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಅಪರಾಧ ಮನೋಭಾವನೆಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ 2025ರ ಏ.12ರಂದು ಬೆಳಗ್ಗೆ 9 ಗಂಟೆಗೆ ಕುರುಗೋಡಿನ ಎಸ್.ಎಲ್.ವಿ ಕಲ್ಯಾಣಮಂಟಪದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಬದುಕು-ಬರಹ’ ಕುರಿತ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಭಾರ ಪ್ರಾಚಾರ್ಯ ಡಾ.ಕೆ.ಮಹೇಶ್, ಸಹಾಯಕ ಪ್ರಾಧ್ಯಾಪಕರಾದ ರಾಜ್ಮಾ ಟಿ.ಎಂ.ಆರ್., ಡಾ.ಜೆ.ಕೃಷ್ಣ, ಎಂ.ಪಿ.ಬಾಲಾಜಿ, ಡಾ.ಅನ್ನಪೂರ್ಣ ಗುಡದೂರು, ಜಿ.ಎಂ.ಮಮತಾ, ಗ್ರಂಥಪಾಲಕ ಎ.ಜಿ.ವೀರಭದ್ರ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.