ಜಿಲ್ಲೆ

ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳಾಗಿಸಿ

ಚಿತ್ರದುರ್ಗ: ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ತಯಾರು ಮಾಡಿದರೆ, ಭವಿಷ್ಯ ರೂಪಿಸಿಕೊಳ್ಳುವುದು ಮಾತ್ರವಲ್ಲ. ಜೀವನದುದ್ದಕ್ಕೂ ಪಾಲಿಸುತ್ತಾರೆ ಎಂದು ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಸಲಹೆ ನೀಡಿದರು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಕ್ಷೇತ್ರಗಳಿಗಿಂತಲೂ ಶಿಕ್ಷಣ ಕ್ಷೇತ್ರ ಶ್ರೇಷ್ಠವಾದದ್ದು. ಈ ದೇಶದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಶಿಕ್ಷಕ ವೃತ್ತಿಯೂ ಅತ್ಯಂತ ಪವಿತ್ರವಾದುದು. ಈ ಕಾರಣಕ್ಕಾಗಿಯೇ ಇಂದಿಗೂ ಮಹತ್ವ ಕಳೆದುಕೊಂಡಿಲ್ಲ ಎಂದರು.

ಶಿಕ್ಷಕರು ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯವಿದೆ. ದೇಶದ ಉಜ್ವಲ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಕ್ತಿ, ಸಾಮರ್ಥ್ಯ ಅರಿತು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಬಾಪೂಜಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಡಾ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ, ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಸಾವಿರಾರು ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ನೂರಾರು ಮಂದಿಯ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.

ಪ್ರಾಚಾರ್ಯರಾದ ಡಾ.ಜಿ.ಇ.ಭೈರಸಿದ್ದಪ್ಪ, ಡಾ.ಈ.ರುದ್ರಮುನಿ, ಎನ್.ಎಲ್.ಹೇಮಂತ್‌ರಾಜ್, ಡಾ.ಅನಂತರಾಮು, ಶಿಕ್ಷಕರಾದ ಗೋವಿಂದರಾಜು, ಸಂಸ್ಥೆಯ ಗೌರಮ್ಮ, ಪ್ರಕಾಶ್ ಇತರರಿದ್ದರು.