ಬೀದರ್: ವಿದ್ಯಾರ್ಥಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕರೊನಾದಿಂದ ತಲ್ಲಣಗೊಂಡ ಸಮಾಜ ಇದೀಗ ಸಹಜ ಸ್ಥಿತಿಯತ್ತ ಬರುತ್ತಿದೆ. ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಮತ್ತೆ ಶೈಕ್ಷಣಿಕ ಚಟುವಟಿಕೆ ಶುರುವಾಗಿವೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಪರಿಷತ್ ಪ್ರಮುಖರು ಆಗ್ರಹಿಸಿದ್ದಾರೆ.
ಸದ್ಯ ಶಾಲೆ-ಕಾಲೇಜು ಆರಂಭವಾಗಿವೆ. ವಿದ್ಯಾರ್ಥಿಗಳು ಊರುಗಳಿಂದ ತರಗತಿಗೆ ಹಾಜರಾಗಲು ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ತೆರೆದಿದ್ದು ಉಳಿದ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಗಳಲ್ಲಿ ವಸತಿ ಕಲ್ಪಿಸಲು ಆದೇಶಿಸಲು ಒತ್ತಾಯಿಸಿದರು.
ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಮೊದಲಿನಂತೆ ಬಸ್ ಸಂಚಾರ ಇರದ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಸ್ ಪಾಸ್ ನೀಡಲು ಆಧಾರ್ ಕಾಡ್೯ ನಲ್ಲಿ ಕಡ್ಡಾಯ ಫೋನ್ ನಂಬರ್ ಲಿಂಕ್ ಇರಬೇಕು ಎನ್ನುವ ನಿಯಮದಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲಕಿದ್ದಾರೆ. ಈ ನಿಯಮ ಕೈಬಿಟ್ಟು ಪಾಸ್ ನೀಡುವ ಅರ್ಹತೆ ಗುರುತಿಸುವ ಹೊಣೆಯನ್ನು ಸಂಪೂರ್ಣವಾಗಿ ಕಾಲೇಜು ಮಂಡಳಿಗಳಿಗೆ ನೀಡಬೇಕು. ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಬಸ್ ಒಡಿಸಬೇಕು ಎಂದು ಆಗ್ರಹಿಸಿದರು.
ಅನೇಕ ಕಾಲೇಜುಗಳಲ್ಲಿ ಕೆಲ ವಿಷಯಗಳ ಕಾಯಂ ಉಪನ್ಯಾಸಕರಿಲ್ಲ. ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು. ತರಗತಿಗಳು ಸರಿಯಾಗಿ ನಡೆಸಲು ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸಿ ಕೋವಿಡ್ ನಿಯಮಾವಳಿಯ ಪಾಲನೆಗೆ ಬೇಕಾದ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್, ನಗರ ಉಪಾಧ್ಯಕ್ಷ ನಾಗೇಶ ಬಿರಾದಾರ, ವಿಕಾಸ ಚೋರಮಲ್ಲೆ, ಸಾಯಿ ಮೂಲಗೆ, ಅರವಿಂದ ಸುಂದಳಕರ್, ಕಿರಣಕುಮಾರ, ಪ್ರದೀಪರೆಡ್ಡಿ, ಶಿವಕಾಂತ ಉಪ್ಪಿನ್, ಪ್ರೀತಿ ಸಿಂಗ್, ಅಭಿಷೇಕ ಉಪ್ಪೆ, ಮೀನಾಕ್ಷಿ ಇತರರಿದ್ದರು.
ಕರೊನಾದಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ ನೆರವಿಗೆ ಬರಬೇಕು.| ರೇವಣಸಿದ್ದ ಜಾಡರ್,ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ