ಸೇಡಂ (ಕಲಬುರಗಿ): ಸಕರ್ಾರಿ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಒತ್ತಾಯಿಸಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಅವರು, ವಿದ್ಯಾರ್ಥಿನಿಯರಿಗೆ ಸಮರ್ಪಕ ಶೌಚಗೃಹವಿಲ್ಲ, ಕೋಣೆಗಳ ರಿಪೇರಿ ಕಾರ್ಯ ಆಗಬೇಕು, ಶುದ್ಧ ನೀರು ಸರಬರಾಜು ಮಾಡಬೇಕು, ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆಯಿದೆ. ಹೀಗೆ ಹೇಳುತ್ತ ಹೋದರೆ, ಪಟ್ಟಿ ದೊಡ್ಡದಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟ್ಯಾಪ್ ಕೊಡುವ ಯೋಜನೆ ಜಾರಿಯಲ್ಲಿತ್ತು, ಇದೀಗ ಅದನ್ನು ನಿಲ್ಲಿಸಿ ಟ್ಯಾಬ್ ಕೊಡಲಾಗುತ್ತಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಟ್ಯಾಬ್ ಸಹ ಸರಿಯಾಗಿ ಸಿಕ್ಕಿಲ್ಲ ಎಂಬ ದೂರುಗಳಿವೆ. ಈ ಎಲ್ಲ ಸಮಸ್ಯೆಗಳನ್ನು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಗಮನಕ್ಕೆ ತಂದು, ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಮಾಣಿಕರಾವ ಕುಲಕರ್ಣಿ, ಪ್ರಮುಖರಾದ ರಾಹುಲ್ ಊಡಗಿ, ಸತೀಶ ಪೂಜಾರಿ, ಬಸವಂತರಾಯ ಪಾಟೀಲ್ ಊಡಗಿ, ಭೀಮು ಪೂಜಾರಿ, ನರೇಶ ಬಟಗೇರಾ ಇತರರಿದ್ದರು.